ಬದಿಯಡ್ಕ: ಕಿಳಿಂಗಾರು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ 81ನೇ ವಾರ್ಷಿಕೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ಶುಕ್ರವಾರ ಜರಗಿತು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪದ್ಮನಾಭ ರೈ ಬಂಡ್ರಡ್ಕ ಧ್ವಜಾರೋಹಣಗೈದು ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದರು.
ಶಾಲಾ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮವನ್ನು ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷರೂ ,ಕಿಳಿಂಗಾರು ಶಾಲಾ ವ್ಯವಸ್ಥಾಪಕರೂ ಆದ ಕೆ. ಎನ್ ಕೃಷ್ಣ ಭಟ್ ಉದ್ಘಾಟಿಸಿದರು.

ಬದಿಯಡ್ಕ ಪಂಚಾಯತಿ ಸದಸ್ಯ ಶಂಕರ ಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾದ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೆ.ಕೈಲಾಸ ಮೂರ್ತಿ ಮತ್ತು ಕಿಳಿಂಗಾರು ನಡುಮನೆ ವೇ.ಮೂ. ಗೋಪಾಲಕೃಷ್ಣ ಭಟ್ ಇವರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಸುಬ್ರಾಯ ಭಟ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪದ್ಮನಾಭ ರೈ, ಮಾತೃ ಸಂಘದ ಅಧ್ಯಕ್ಷೆ ವಸಂತಿ ಬಂಡ್ರಡ್ಕ ಶುಭಾಶಂಸನೆಗೈದರು.
ಶಾಲಾ ವತಿಯಿಂದ ಉಪಜಿಲ್ಲಾ ವಿದ್ಯಾಧಿಕಾರಿಯವರಾದ ಕೈಲಾಸ ಮೂರ್ತಿ ಹಾಗೂ ವೇ.ಮೂ. ಗೋಪಾಲಕೃಷ್ಣ ಭಟ್ ಕಿಳಿಂಗಾರು ಅವರನ್ನು ಗೌರವಿಸಲಾಯಿತು. ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯವರಿಂದ ಹಾಗೂ ಹಳೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳು ಜರಗಿತು.
ಶಾಲಾ ಮುಖ್ಯೋಪಾಧ್ಯಾಯ ಕೆ.ರಾಮಕೃಷ್ಣ ಭಟ್ ಸ್ವಾಗತಿಸಿ, ವರದಿ ವಾಚಿಸಿದರು. ಶಿಕ್ಷಕಿ ಮಧುಮತಿ ಎ ವಂದಿಸಿದರು. ಅಧ್ಯಾಪಿಕೆ ಶ್ರೀವಿದ್ಯಾ, ಅಧ್ಯಾಪಕ ಪ್ರದೀಪ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.