ಕುಂಟಿಕಾನ ಶಾಲೆಯಲ್ಲಿ ಶೌಚಾಲಯ ಕಟ್ಟಡ ಉದ್ಘಾಟನೆ
0
ಮಾರ್ಚ್ 09, 2019
ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯತಿ ವತಿಯಿಂದ ಕುಂಟಿಕಾನ ಅನುದಾನಿತ ಹಿರಿಯ ಬುನಾದಿ ಶಾಲೆಗೆ ನೀಡಲ್ಪಟ್ಟ ಹೆಣ್ಣುಮಕ್ಕಳ ಶೌಚಾಲಯ ಕಟ್ಟಡವನ್ನು ಗ್ರಾಮಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಗುರುವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಶಾಲೆಗಳು ಅಭಿವೃದ್ಧಿಯನ್ನು ಕಾಣಬೇಕೆಂದು ಗ್ರಾಮಪಂಚಾಯತ್ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದು ಇದರಲ್ಲಿ ಶೌಚಾಲಯವೂ ಪ್ರಧಾನವಾಗಿದೆ. ಗ್ರಾಮಪಂಚಾಯತ್‍ನ ವ್ಯಾಪ್ತಿಯಲ್ಲಿರುವ 5 ಅನುದಾನಿತ ಶಾಲೆಗಳಿಗೆ ಈ ರೀತಿಯ ಶೌಚಾಲಯಗಳು ಲಭಿಸಲಿವೆ ಎಂದರು.
ಬದಿಯಡ್ಕ ಗ್ರಾಮಪಂಚಾಯತಿ ಉಪಾಧ್ಯಕ್ಷೆ ಸೈಬುನ್ನೀಸ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ವಾರ್ಡು ಸದಸ್ಯೆ ಜಯಂತಿ ಶುಭಾಶಂಸನೆಗೈದು ಮಾತನಾಡಿ ಹಳ್ಳಿಪ್ರದೇಶದ ಶಾಲೆಗೆ ಗ್ರಾಮಪಂಚಾಯತಿ ವತಿಯಿಂದ ಲಭಿಸಿದ ಶೌಚಾಲಯವು ಶಾಲೆಯ ಪ್ರಗತಿಗೆ ಸಹಕಾರಿಯಾಗಲಿದೆ ಎಂದರು. ಬದಿಯಡ್ಕ ಗ್ರಾಮಪಂಚಾಯತ್ ಕಾರ್ಯದರ್ಶಿ ಶೈಲೇಂದ್ರನ್ ಮಾತನಾಡಿದರು. ಶಾಲಾ ಎಂಪಿಟಿಎ ಬೇಬಿ ಪಾಡ್ಲಡ್ಕ ಉಪಸ್ಥಿತರಿದ್ದರು. ಶಾಲಾ ವ್ಯವಸ್ಥಾಪಕ ಶಂಕರನಾರಾಯಣ ಶರ್ಮ ಮಾತನಾಡುತ್ತಾ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತನ್ನು ನೀಡಿ ಗ್ರಾಮಪಂಚಾಯತ್ ನೀಡಿದ ಶೌಚಾಲಯವನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು ಎಂದು ಅತಿಥಿಗಳನ್ನು ಸ್ವಾಗತಿಸಿ, ಶಾಲಾ ಮುಖ್ಯೋಪಾಧ್ಯಾಯ ಮಹಾಲಿಂಗೇಶ್ವರ ಭಟ್ ವಂದಿಸಿದರು. ಶಾಲಾ ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.




