ಬದಿಯಡ್ಕ: ಗಡಿನಾಡಿನ ಹಿರಿಯ ಸಾಹಿತಿ, ಭಾಷಾಂತರಕಾರ, ಸಾಹಿತ್ಯ ಸಾಂಸ್ಕøತಿಕ ರಂಗದ ಸಂಘಟಕರಾಗಿ ಗುರುತಿಸಿಕೊಂಡಿದ್ದ ಕೇಳು ಮಾಸ್ತರ್ ಅಗಲ್ಪಾಡಿ (70) ಅಲ್ಪಕಾಲದ ಅಸೌಖ್ಯದ ಬಳಿಕ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದವರು ಶುಕ್ರವಾರ ನಿಧನರಾದರು.
ಮಲೆಯಾಳಂ ಮತ್ತು ಕನ್ನಡ ಭಾಷೆಗಳೆರಡರಲ್ಲೂ ಪಾಂಡಿತ್ಯ ಹೊಂದಿದ್ದ ಕೇಳು ಮಾಸ್ತರ್ ಶಿಕ್ಷಕರಾಗಿ, ಬಳಿಕ ಕೀರಿಕ್ಕಾಡು ವಿದ್ಯಾವಿನೋದಿನಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾಗಿದ್ದರು. ಬದಿಯಡ್ಕದಲ್ಲಿ ಕರ್ನಾಟಕ ಸರಕಾರದ ಪುಸ್ತಕ ಪ್ರಾಧಿಕಾರದ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯ ಸಂಚಾಲಕರಾಗಿ, ತಿಂಗಳ ಕಾರ್ಯಕ್ರಮಗಳ ಮೂಲಕ ಜನಪ್ರೀಯರಾಗಿದ್ದರು. ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಕಾರ್ಯದರ್ಶಿಯಾಗಿ, ಕನ್ನಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಕಾಸರಗೋಡಿನ ಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಕರಾವಳಿಯ ದೈವಾರಾಧನೆ, ಜೊತೆಗೆ ಮಲೆಯಾಳಿ ದೈವಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದ ಅವರು, ಕೇರಳದ ತೈಯ್ಯಂ ಕೃತಿ ಎರಡು ಸಂಪುಟಗಳಲ್ಲಿ ಪ್ರಕಟಗೊಂಡಿದ್ದು,2007ರಲ್ಲಿ ಉಡುಪಿಯಲ್ಲಿ ನಡೆದ 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಯ್ಕೆಯಾದ ಕೃತಿಯಾಗಿ ಗುರುತಿಸಿಕೊಂಡಿತ್ತು.2013ರಲ್ಲಿ ಎರಡನೇ ಸಂಪುಟ ಪ್ರಕಟಗೊಂಡಿತ್ತು. ಮಿಕ್ಕುಳಿದಂತೆ ಸ್ವಾಮಿ ಅಯ್ಯಪ್ಪ ಕ್ಷೇತ್ರ ಮಹಿಮೆ(11 ಮುದ್ರಣಗಳು), ಸ್ವಾಮಿ ಅಯ್ಯಪ್ಪ ಪೂಜಾ ವಿಧಾನಗಳು(6 ಮುದ್ರಣ), ಸ್ವತಂತ್ರ ಭಾರತದ ಕಲಶಗಳು, ಭಜನಾಮೃತ, ಕರ್ನಾಟಕದ ವೀರ ನಾರಿಯರು, ಶ್ರೀವಯನಾಟ್ ಕುಲವನ್(ಐತಿಹ್ಯ-ಅನುಷ್ಠಾನ ಕ್ರಮಗಳ ಪರಿಚಯ),ಕುಂಬಳೆ ಸೀಮೆಯ ಮಹಾತ್ಮ್ಯೆ(ಸಂಪಾದಿತ), ಕಾಸರಗೋಡಿನ ದೂರವಾಣಿ ಸಂಖ್ಯೆ ಕನ್ನಡ ಕೈಪಿಡಿ, ಪರಶ್ಚಿನಕಡವು ಶ್ರೀಮುತ್ತಪ್ಪನ್(ಐತಿಹ್ಯ ಮತ್ತು ಅನುಷ್ಠಾನ ಕ್ರಮಗಳು), ಕಥಕ್ಕಳಿ, ಮಾಡಾಯಿಕ್ಕಾವಿಲಮ್ಮ ಮೊದಲಾದ ಕೃತಿಗಳನ್ನು ಬರೆದಿದ್ದು, ಜನವರಿ ಯಲ್ಲಿ ಇವರಚ ಕೃತಿ ಕಾಸರಗೋಡಿನ ಸಿರಿಗನ್ನಡ ಸಾಹಿತಿಗಳು ವಿಶೇಷ ಕೃತಿ ಬೆಂಗಳೂರಿನಲ್ಲಿ ಬಿಡುಗಡೆಯಾಗಿತ್ತು. ಕೇರಳದ ಅನುಷ್ಠಾನ ಕಲೆಗಳು, ಯಕ್ಷಾಂಗಣ, ಕೇರಳದ ಜಾನಪದ ಕಲೆಗಳು, ಕಾಸರಗೋಡಿನ ಸಾಹಿತ್ಯ ಲೋಕ ಭಾಗ 1 ಮೊದಲಾದ ಕೃತಿಗಳು ಅಪ್ರಕಟಿತವಾಗಿ ಉಳಿದಿವೆ.
ಮಾಸ್ತರರ ಸಾಹಿತ್ಯ ಸೇವೆಗಳನ್ನು ಅಂಗೀಕರಿಸಿ ಕೇರಳ ರಾಜ್ಯೋದಯ ಜಿಲ್ಲಾ ಪುರಸ್ಕಾರ, ಜಿಲ್ಲಾ ಭಾಷಾ ಸಂಗಮ ಸನ್ಮಾನ, ನಾಡೋಜ ಎಚ್.ಎಲ್.ನಾಗೇಗೌಡರ ಜನ್ಮ ಶತಮಾನೋತ್ಸವದ ಅಂಗವಾಗಿ 2015ರಲ್ಲಿ ಸನ್ಮಾನ, ಕರ್ನಾಟಕ ಸಂಘ ಮುಂಬಯಿ ಘಟಕದ ಸನ್ಮಾನ, ಕಲ್ಕೂರ ಗಡಿನಾಡ ಸಾಹಿತ್ಯ ಸಿರಿ ಪುರಸ್ಕಾರ, ಕರ್ನಾಟಕ ಸರಕಾರದ ಜಾನಪದ ಅಕಾಡೆಮಿಯ ಶ್ರೇಷ್ಠ ಗ್ರಂಥ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗಳನ್ನು ನೀಡಲಾಗಿದೆ.
ಯಕ್ಷಗಾನ ಕಲೆಯಲ್ಲಿ ವಿಶೇಷ ಅಭಿರುಚಿಯಿದ್ದ ಮಾಸ್ತರರು ತಮ್ಮ ಬಾಲ್ಯ ಕಾಲದಲ್ಲಿ ಕೆಲವು ವರ್ಷಗಳ ಕಾಲ ಮಾನ್ಯ ಮೇಳವನ್ನು ಸ್ಥಾಪಿಸಿ ಮುನ್ನಡಿಸಿದ್ದರು. ಕಾಸರಗೋಡಿನ ಕಲೆ, ಸಾಹಿತ್ಯದೊಂದಿಗೆ ಅತ್ಯಂತ ನಿಕಟತೆ ಮತ್ತು ಅಪಾರ ಜ್ಞಾನವುಳ್ಳವರಾಗಿದ್ದ ಕೇಳು ಮಾಸ್ತರರು ಸಂಚರಿಸುವ ವಿಶ್ವ ವಿದ್ಯಾನಿಲಯ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದು, ದಿನನಿತ್ಯ ಇವರ ಬಳಿಗೆ ಅನೇಕ ಸಾಹಿತ್ಯಾಸಕ್ತರು, ಸಂಶೋಧನಾ ವಿದ್ಯಾರ್ಥಿಗಳು ಮಾಹಿತಿ ಸಂಗ್ರಹಕ್ಕಾಗಿ ಆಗಮಿಸುತ್ತಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದು, ಅವರ ನಿಧನ ಗಡಿನಾಡಿಗೆ ತುಂಬಲಾರದ ನಷ್ಟವಾಗಿದ್ದು, ಕಸಾಪ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಸಹಿತ ಗಣ್ಯರು ಶ್ರದ್ದಾಂಜಲಿ ಸಲ್ಲಿಸಿದ್ದಾರೆ.