ಜಲಕ್ಷಾಮದ ಭೀತಿಯ ಮಧ್ಯೆ ಜಲ ಪ್ರಾಧಿಕಾರದ ನೀರು ಮಾತ್ರ ಭಾರೀ ಪ್ರಮಾಣದಲ್ಲಿ ಅಲ್ಲಲ್ಲಿ ಪೋಲು!!
0
ಮಾರ್ಚ್ 08, 2019
ಪೆರ್ಲ:ಮಾರ್ಚ್ ತಿಂಗಳು ಬಂದಂತೆ ಎಣ್ಮಕಜೆ ಪಂಚಾಯಿತಿ ವ್ಯಾಪ್ತಿಯ ಜಲಾಶಯಗಳೆಲ್ಲವೂ ಬತ್ತಿ ಬರಡಾಗಿರುವಾಗ ಜಲ ಪ್ರಾಧಿಕಾರದ ನೀರು ಮಾತ್ರ ಅಲ್ಲಲ್ಲಿ ವ್ಯಾಪಕ ಪ್ರಮಾಣದಲ್ಲಿ ಪೋಲಾಗುತ್ತಿರುವುದು ಕಂಡುಬಂದಿದೆ.
ಪೆರ್ಲ ಪೂವನಡ್ಕ ರಸ್ತೆಯ ಬಜಕೂಡ್ಲು ಕ್ಷೇತ್ರ ತಿರುವು ರಸ್ತೆ ಸಮೀಪ ಪೈಪ್ ಒಡೆದಿದ್ದು ಕಳೆದ ಹಲವು ದಿನಗಳಿಂದ ಜಲ ಪ್ರಾಧಿಕಾರ ಗೇಟ್ವಾಲ್ ತೆರೆದಾಗೆಲ್ಲಾ ಭಾರೀ ಪ್ರಮಾಣದ ನೀರು ರಸ್ತೆಯಲ್ಲೇ ಹರಿದು ಪೋಲಾಗುತ್ತಿರುವುದಲ್ಲದೆ ರಸ್ತೆಗೂ ಹಾನಿ ಉಂಟಾಗಿದ್ದು ರಸ್ತೆಯಲ್ಲಿ ಭಾರೀ ಗಾತ್ರದ ಹೊಂಡ ಸೃಷ್ಟಿಯಾಗಿದೆ.
ಮಂಗಳವಾರ ರಾತ್ರಿ ಸ್ವರ್ಗ ತೋಡಿನ ಬಳಿ ಪೈಪ್ ಒಡೆದು ಭಾರೀ ಪ್ರಮಾಣದ ನೀರು ರಸ್ತೆ ಉದ್ದಕ್ಕೂ ಸಂಚರಿಸಿ ಸಮೀಪದ ಅಡಕೆ ತೋಟ ಹಾಗೂ ತೋಡಿಗೆ ಸೇರಿತ್ತು.
ಪೆರ್ಲ, ಸ್ವರ್ಗ, ಕಾಟುಕುಕ್ಕೆ ಮೊದಲಾಗಿ ಹಲವೆಡೆಗಳಲ್ಲಿ ಇದೇ ರೀತಿ ಪ್ರಾಧಿಕಾರದ ನೀರು ರಸ್ತೆ ಉದ್ದಕ್ಕೂ ಹರಿದು ಪೋಲಾಗುತ್ತಿದೆ.ಈ ಬಗ್ಗೆ ದೂರು ನೀಡಿದಲ್ಲಿ ಆ ಭಾಗದ ನೀರು ಪೂರೈಕೆ ಸ್ಥಗಿತ ಗೊಳಿಸಲಾಗುತ್ತಿದೆ.
ಜಲ ಪ್ರಾಧಿಕಾರವು ಪೈಪ್ ಲೈನ್ ಹೊಂಡ ನಿರ್ಮಾಣ, ಪೈಪ್ ಸ್ಥಾಪನೆ, ಇತರ ಉಪಕರಣಗಳ ಜೋಡಣೆ, ಮನೆಗಳಿಗೆ ಸಂಪರ್ಕ ಹೀಗೆ ಪ್ರತಿ ಹಂತವನ್ನೂ ಗುತ್ತಿಗೆ ಆಧಾರದಲ್ಲಿ ಖಾಸಗೀ ವ್ಯಕ್ತಿಗಳಿಗೆ ವಹಿಸಿ ಕೊಡುತ್ತಿರುವುದು ಕಳಪೆ ಮಟ್ಟದ ಸಾಮಗ್ರಿಗಳ ಬಳಕೆಗೆ ಕಾರಣವಾಗಿದೆ ಎಂಬ ದೂರು ಕೇಳಿ ಬರುತ್ತಿದ್ದು , ಕಳಪೆ ಗುಣಮಟ್ಟದ ಪೈಪ್ ಗಳನ್ನು ಬದಲಿಸಿ ಗುಣಮಟ್ಟದ ಪೈಪ್ ಅಳವಡಿಸುವಂತೆ ನಾಗರಿಕರು ವಿನಂತಿಸಿದ್ದಾರೆ.




