ವಿಶೇಷ ಚೇತನರಿಗೆ ಕೈಯಾಸರೆಯಾದ ಸಂಸದರ ನಿಧಿ
0
ಮಾರ್ಚ್ 09, 2019
ಕಾಸರಗೋಡು: ಸಂಸದ ಪಿ.ಕರುಣಾಕರನ್ ಅವರ ಸ್ಥಳೀಯ ಅಭಿವೃದ್ಧಿ ನಿಧಿ ವಿಶೇಷಚೇತನರಿಗೆ ಕೈಯಾಸರೆಯಾಗಿದೆ.
ಈ ನಿಧಿ ಬಳಸಿ ವಿಶೇಷಚೇತನರಿಗೆ ವಿದ್ಯುನ್ಮಾನ ಗಾಲಿ ಕುರ್ಚಿ, ಬದಿಗಾಲಿ ಅಳವಡಿಸಿದ ತ್ರಿಚಕ್ರ ವಾಹನ ಇತ್ಯಾದಿ ವಿತರಣೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಈ ಸಂಬಂಧ ನಡೆದ ಸಮಾರಂಭದಲ್ಲಿ ಸಂಸದ ಪಿ.ಕರುಣಾಕರನ್ ಈ ಸಲಕರಣೆಗಳ ವಿತರಣೆ ನಡೆಸಿದರು.
99,500 ರೂ. ಮೌಲ್ಯದ ಎರಡು ವಿದ್ಯುನ್ಮಾನ ಗಾಲಿಕುರ್ಚಿ, 81 ಸಾವಿರ ರೂ. ಮೌಲ್ಯದ ತ್ರಿಚಕ್ರವಾಹನ ಖರೀದಿಸಿ ವಿತರಿಸಲಾಗಿದೆ. ಸಮಾಜನೀತಿ ಇಲಾಖೆಗೆ ಸಲ್ಲಿಸಲಾದ ಅರ್ಜಿಗಳ ಹಿನ್ನೆಲೆಯಲ್ಲಿ ಅರ್ಹರ ಆಯ್ಕೆ ನಡೆಸಲಾಗಿದ್ದು, ಚಂದೇರ ಕಾಂ??ರಿಕ್ಕಲ್ ಹೌಸ್ ನಿವಾಸಿ ಕೆ.ರಾಜೀವನ್(48) , ಎಡನೀರಿನ ಪಾಡಿ ಕನ್ನಿಕುಂಡ್ ನಿವಾಸಿವಾಮನ(35) ಎಂಬವರಿಗೆ ವಿದ್ಯುನ್ಮಾನ ಗಾಲಿ ಕುರ್ಚಿ, ಮಡಿಕೈ ಚದುರಕಿಣರ್ ಚೆಟ್ಟಿ ವೀಟ್ಟಿಲ್ ನಿವಾಸಿ ಗಣೇಶನ್(35) ಅವರಿಗೆ ತ್ರಿಚಕ್ರ ವಾಹನ ಲಭಿಸಿದೆ.
ಈ ಸಂದರ್ಭ ಮಾತನಾಡಿದ ಸಂಸದ ಅವರು ಕಾಸರಗೋಡು ಕ್ಷೇತ್ರದಲ್ಲಿ ಸಂಸದರ ಸ್ಥಳೀಯ ಅಭಿವೃದ್ಧಿ ನಿಧಿಯ ಮೊಬಲಗಿನಲ್ಲಿ ಶೇ 98 ವಿನಿಯೋಗಿಸಲಾಗಿದೆ. ಇದರಲ್ಲಿ ಹತ್ತು ಕಡೆ ವಿಶೇಷಚೇತನರ ಸಹಾಯಕ್ಕೆ ಸಲಕರಣೆಗಳನ್ನು ಖರೀದಿಸಿ ವಿತರಿಸಲಾಗಿದೆ ಎಂದು ತಿಳಿಸಿದರು.
ಈ ನಿಧಿಯಿಂದ 61 ಶಾಲೆಗಳಿಗೆ ಬಸ್ ಖರೀದಿ ಸಾಧ್ಯವಾಗಿದೆ. ರಾಜ್ಯದಲ್ಲಿ ಪ್ರಥಮಬಾರಿಗೆ ಸಂಸದರ ನಿಧಿಯಿಂದ ಶಾಲೆಗೆ ಬಸ್ ಖರೀದಿ ಈ ಮೂಲಕ ನಡೆದಿದೆ. ಇತರ ಕ್ಷೇತ್ರಗಳಿಗೆ ಈ ಯೋಜನೆ ಮಾದರಿಯಾಗಿದೆ ಎಂದವರು ನುಡಿದರು.
15 ಆಸ್ಪತ್ರೆಗಳಿಗೆ ಈ ನಿಧಿ ಮೂಲಕ ತುರ್ತು ಚಿಕಿತ್ಸಾ ವಾಹನ ಖರೀದಿಸಲಾಗಿದೆ. ನಬಾರ್ಡ್ ಆರ್.ಐ.ಡಿ.ಎಫ್ ಯೋಜನೆಯನ್ನು ಎಂಡೋಸಲ್ಫಾನ್ ಸಂತ್ರಸ್ತರ ವಲಯದಲ್ಲಿ ಜಾರಿಗೊಳಿಸಲು ಸಾಧ್ಯವಾದುದು ದೊಡ್ಡ ಸಾಧನೆ. ಈ ವಲಯಗಳಲ್ಲಿ ಮೂಲಭೂತ ಸೌಲಭ್ಯ ಮತ್ತು ಅಭಿವೃದ್ಧಿಗೆ ಕೋಟಿಗಟ್ಟಲೆ ರೂ.ವೆಚ್ಚ ನಡೆಸಲು ಸಾಧ್ಯವಾಗಿದೆ. ಪ್ರದಾನವಾಹಿನಿಯಿಂದ ಬೇರ್ಪಟ್ಟ ಜನಾಂಗದವರ ಸೌಲಭ್ಯಕ್ಕೂ ಸಹಾಯ ಒದಗಿಸಲು ನಿಧಿಯ ಮೂಲಕ ಸಾಧ್ಯವಾಗಿದೆ ಎಂದವರು ಹೇಳಿದರು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಾಜನೀತಿ ಅಧಿಕಾರಿ ಎನ್.ಭಾಸ್ಕರನ್ ಸ್ವಾಗತಿಸಿದರು.




