ಆರಾಧನಾಲಯಗಳು ಸನಾತನತೆಯ ಸಂರಕ್ಷಣ ಕೇಂದ್ರಗಳು-ಪುಂಡರೀಕಾಕ್ಷ ಬೆಳ್ಳೂರು
0
ಮಾರ್ಚ್ 10, 2019
ಮಂಜೇಶ್ವರ: ಭಾರತೀಯ ಸಂಸ್ಕøತಿಯಲ್ಲಿ ಆಶ್ರಮ ಧರ್ಮಕ್ಕೆ ಮಹತ್ವವಿದ್ದು, ಈ ಪೈಕಿ ಗೃಹಸ್ಥಾಶ್ರಮ ಧರ್ಮ ಸರ್ವ ವಿಧದಿಂದಲೂ ಮಹತ್ವದ್ದಾದುದು. ಕೌಟುಂಬಿಕ ವ್ಯವಸ್ಥೆಗಳ ಜೊತೆಗೆ ಸಮಾಜಮುಖಿಯಾಗಿ ಸಲ್ಲಿಸಬೇಕಾದ ಕರ್ತವ್ಯಗಳ ಬಗೆಗೂ ಪ್ರತಿಯೊಬ್ಬ ಗೃಹಸ್ಥ ಜವಾಬ್ದಾರಿಯುತರಾಗಿ ಕಾರ್ಯನಿರ್ವಹಿಸಿದಾಗ ಸಾಮಾಜಿಕ ಕ್ಲೇಶ ರಹಿತವಾದ ನೆಮ್ಮದಿ ಪ್ರಾಪ್ತಿಯಾಗುವುದು ಎಂದು ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅವರು ತಿಳಿಸಿದರು.
ಪಾವೂರು ಕೊಪ್ಪಳದ ಶ್ರೀಮಹಾ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಸಾನಿಧ್ಯ ವೃದ್ದಿಗಾಗಿ ನಡೆಯುತ್ತಿರುವ 48 ದಿನಗಳ ಉದಯಾಸ್ತಮಾನ ಮೌನ ನಾಮಜಪ ಕಾರ್ಯಕ್ರಮದ ಐದನೇ ದಿನವಾದ ಶನಿವಾರ ಸಂಜೆ ನಡೆದ ಸತ್ಸಂಗದಲ್ಲಿ ಅವರು ಮಾತನಾಡಿದರು.
ಆರಾಧನಾಲಯಗಳು ಶಕ್ತಿ ಕೇಂದ್ರಗಳಾಗಿ ಸನಾತನತೆಯ ಸಂರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಧನಾತ್ಮಕ ಚೈತನ್ಯ ವೃದ್ದಿಯಲ್ಲಿ ದೇವಾಲಯಗಳ ಪುನಶ್ಚೇತನ ಅಗತ್ಯವಿದ್ದು, ಜನರು ಪರಸ್ಪರ ಕೈಜೋಡಿಸಿ ಶ್ರದ್ದಾ ಕೇಂದ್ರಗಳ ಸಾನ್ನಿಧ್ಯ ವೃದ್ದಿಗೆ ಸಹಕರಿಸಬೇಕು ಎಂದು ಅವರು ತಿಳಿಸಿದರು.
ಸಾಮಾಜಿಕ, ಧಾರ್ಮಿಕ ಮುಂದಾಳು ರಾಮಣ್ಣ ಶೆಟ್ಟಿ ಆಳ್ವರಬೆಟ್ಟು ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಸಂಘಟನಾ ಶಕ್ತಿಯು ಸವಾಲುಗಳನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ನೆರವಾಗುತ್ತದೆ. ವೈಯುಕ್ತಿಕ ಆಶೋತ್ತರಗಳತ್ತ ವಾಲದೆ, ಸಮಾಜಮುಖಿ ಚಿಂತನೆ, ಧಾರ್ಮಿಕ-ಆಧ್ಯಾತ್ಮಿಕ ಸಾನ್ನಿಧ್ಯಗಳ ಅಭಿವೃದ್ದಿಗೆ ಬದುಕನ್ನು ತೆರೆಸಿಕೊಂಡಾಗ ತೃಪ್ತಿಯ ಸಾರ್ಥಕತೆ ಮೂಡುತ್ತದೆ ಎಂದು ತಿಳಿಸಿದರು.
ಸಾಮಾಜಿಕ, ಧಾರ್ಮಿಕ ನೇತಾರ ಗೋಪಾಲ ಶೆಟ್ಟಿ ಅರಿಬೈಲು, ಐತ್ತಪ್ಪ ಉದ್ಯಾವರಗುತ್ತು, ಪಾವೂರು ಬಜಾಲಿನ ಶ್ರೀಚಾಮುಂಡೇಶ್ವರಿ ಆಡಳಿತ ಸಮಿತಿ ಅಧ್ಯಕ್ಷ ಮಾಧವ ಪೂಜಾರಿ ಕದ್ಕೋರಿ, ಸಂಜೀವ ಶೆಟ್ಟಿ ಮಾಡ, ಸುಬ್ಬ ಗುರುಸ್ವಾಮಿ ಪಾವೂರು, ಪತ್ರಕರ್ತ ಪುರುಷೋತ್ತಮ ಭಟ್ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಕುಶಾಲಾಕ್ಷಿ ಕಾನದಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
ಶನಿವಾರ ಬೆಳಿಗ್ಗೆ ಗಣಪತಿ ಹವನ, ಬಳಿಕ ಯೋಗಾಚಾರ್ಯ ಪುಂಡರೀಕಾಕ್ಷ ಅವರಿಂದ ಮೌನ ನಾಮ ಜಪ ನಡೆಯಿತು. ಭಕ್ತರಿಂದ ಸಾವಿರ ಸಂಖ್ಯೆಯಲ್ಲಿ ನಾಮ ಜಪ ನೆರವೇರಿತು. ಮಂಜೇಶ್ವರ ಉದ್ಯಾವರ ಗುತ್ತಿನ ಶ್ರೀಸತ್ಯನಾರಾಯಣ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ ನಡೆಯಿತು.

