ವಿಮುಕ್ತಿ ಬೋಧನಾ ತರಗತಿ-ಆರೋಗ್ಯ ವಿಚಾರಸಂಕಿರಣ
0
ಮಾರ್ಚ್ 16, 2019
ಉಪ್ಪಳ: ಸಾಮಾಜಿಕ ಏಕತೆ, ಸಾರ್ವಜನಿಕ ಶಾಂತಿಗೆ ಧಕ್ಕೆಯಾಗುವ ಮದ್ಯ ಸಹಿತವಾದ ಅಮಲು ಪದಾರ್ಥಗಳನ್ನು ನಿಯಂತ್ರಿಸುವ ಅಗತ್ಯವಿದೆ. ಮದ್ಯ ನಿಷೇಧದ ಬದಲು ಮದ್ಯದಬಗೆಗಿನ ಜಾಗೃತಿಯ ಮೂಲಕ ನಿಯಂತ್ರಿಸುವ ನಿಟ್ಟಿನಲ್ಲಿ ಅಬಕಾರಿ ಇಲಾಖೆ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕು ಎಮದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಕರೆ ನೀಡಿದರು.
ಸಾಮಾಜಿಕ ಸವಾಲುಗಳಿಗೆ ಕಾರಣವಾಗುವ ಅಮಲು ಪದಾರ್ಥಗಳ ವಿರುದ್ದ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದೇರಡ್ಕ ಕಾಲನಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮದ್ಯ ಹಾಗೂ ಇತರ ಅಮಲು ಪದಾರ್ಥಗಳು ಯಾವುದೇ ರಾಜಕೀಯ ಪಕ್ಷಗಳಿಗೆ ಮತ ಪಡೆಯಲಿರುವ ಆಯುಧವಾಗಿ ಇರಬಾರದು. ವಿದ್ಯಾವಂತರನ್ನೂ, ಅವಿದ್ಯಾವಂತರನ್ನೂ ಚಂಚಲತೆಗೊಳಪಡಿಸಿ, ಅಸಭ್ಯರನ್ನಾಗಿಸುವ ಅಮಲು ಪದಾರ್ಥಗಳ ನಿಯಂತ್ರಣದಲ್ಲಿ ಯುವ ಸಮೂಹ ಕ್ರಿಯಾತ್ಮಕವಾಗಿ ನಿಯಂತ್ರಣದಲ್ಲಿ ಕೈಜೋಡಿಸಬೇಕು. ಹಳಿ ಮೀರುವ ಮನಸ್ಸನ್ನು ನಿಯಂತ್ರಿಸುವ ಚಾಣಾಕ್ಷತೆಯನ್ನು ಪ್ರತಿಯೊಬ್ಬರೂ ಅನುಸರಿಸುವ ಬುದ್ದಿವಂತಿಕೆಯನ್ನು ಬೆಳೆಸಬೇಕು ಎಂದು ಅವರು ಈ ಸಂದರ್ಭ ತಿಳಿಸಿದರು.
ಸಮಾರಂಭದಲ್ಲಿ ಹೆಚ್ಚುವರಿ ಅಬಕಾರಿ ಅಧಿಕಾರಿ ಜೇಕಬ್ ಜೋನ್ ಅಧ್ಯಕ್ಷತೆ ವಹಿಸಿದ್ದರು. ನಾಗರಿಕ ಅಬಕಾರಿ ಅಧಿಕಾರಿ ಚಾಲ್ಸ್ ಜೋಸ್, ಡಾ.ಕೇಶವ ನಾಯ್ಕ್ ಕಾರ್ಯಕ್ರಮದಲ್ಲಿ ಜಾಗೃತಿ ತರಗತಿಗಳನ್ನು ನಡೆಸಿದರು. ಮೋಹನನ್ ಎನ್.ವಿ, ರಾಜ್‍ಕುಮಾರ್, ಚಂದ್ರ ನಾಯ್ಕ್, ಸುನಂದಾ ಉಪಸ್ಥಿತರಿದ್ದು ಶುಭಹಾರೈಸಿದರು. ಪ್ರಸನ್ನ ಕುಮಾರ್ ಸ್ವಾಗತಿಸಿ, ರಾಮಚಂದ್ರನ್ ವಂದಿಸಿದರು.

