ತಲಪಾಡಿಯಲ್ಲಿ ಗ್ಯಾಸ್ ಸೋರಿಕೆ: ಆತಂಕದ ವಾತಾವರಣ
0
ಮಾರ್ಚ್ 12, 2019
ಮಂಜೇಶ್ವರ: ತಲಪಾಡಿ ಆರ್ ಟಿ ಒ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಲಾಗಿದ್ದ ಟ್ಯಾಂಕರೊಂದರಲ್ಲಿ ಗ್ಯಾಸ್ ಸೋರಿಕೆ ಉಂಟಾಗಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಮಂಗಳವಾರ ಸಂಜೆ 6 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಟ್ಯಾಂಕರಿನ ಮೇಲ್ಬಾಗದಿಂದ ಗ್ಯಾಸ್ ಮೇಲಕ್ಕೆ ಚಿಮ್ಮುತ್ತಿರುವುದು ಆತಂಕಕ್ಕೆ ಕಾರಣವಾಯಿತು. ಕೂಡಲೇ ಮಂಜೇಶ್ವರ ಪೊಲೀಸರು ಹಾಗೂ ಅಗ್ನಿಶಾಮಕ ದಳ ಆಗಮಿಸಿ ಸುರಕ್ಷತೆಗೆ ಕ್ರಮ ಕೈಗೊಂಡಿದ್ದಾರೆ.
ಕಾಸರಗೋಡು ಭಾಗದಿಂದ ಆಗಮಿಸುತ್ತಿರುವ ವಾಹನಗಳನ್ನು ತೂಮಿನಾಡಿನಲ್ಲಿ ತಡೆದು ಒಳ ರಸ್ತೆಯಿಂದಾಗಿ ತಲಪಾಡಿ ಭಾಗಕ್ಕೆ ಕಳುಹಿಸಲಾಯಿತು. ವಿದ್ಯುತ್ ಸಂಪರ್ಕವನ್ನು ಸಂಪೂರ್ಣವಾಗಿ ವಿಚ್ಚೇಧಿಸಲಾಗಿದೆ.
ಘಟನಾ ಸ್ಥಳದಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಪೊಲೀಸರನ್ನು ನಿಯೋಗಿಸಲಾಗಿದೆ. ಸೋರಿಕೆಯಿಂದ ಆಪಾಯ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಟ್ಯಾಂಕರ್ ಸಮೀಪದ ವ್ಯಾಪಾರ ಕೇಂದ್ರಗಳನ್ನು ಮುಚ್ಚುಗಡೆಗೊಳಿಸಲಾಯಿತು.
ಮಂಗಳೂರಿನಿಂದ ಕಾಸರಗೋಡು ಭಾಗಕ್ಕೆ ಆಗಮಿಸುವ ಟ್ಯಾಂಕರಿನಲ್ಲಿ ಗ್ಯಾಸ್ ಸೋರಿಕೆ ಉಂಟಾಗಿದೆ. ಮಂಗಳೂರಿನಿಂದ ತಜ್ಞರು ಆಗಮಿಸಿ ಕ್ರಮ ಕೈಗೊಳ್ಳಲಾಗುವುದಾಗಿ ನಿರೀಕ್ಷಿಸಲಾಗಿದೆ.




