ಉಡುಪಿ/ಕಾಸರಗೋಡು: ಶ್ರೀಲಂಕಾದ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಅವರು ಪತ್ನೀ ಸಹಿತ ನಿನ್ನೆ ಕೊಲ್ಲೂರಿನ ಶ್ರೀಮೂಕಾಂಬಿಕಾ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ನಿನ್ನೆ ಬೆಳಿಗ್ಗೆ 11.40ರ ಸುಮಾರಿಗೆ ಕೊಲ್ಲೂರು ಶ್ರೀಕ್ಷೇತ್ರಕ್ಕೆ ಆಗಮಿಸಿದ ಶ್ರೀಲಂಕಾ ಪ್ರಧಾನಿಗಳಿಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಿಂದ ಸಕಲ ಗೌರವದ ಸ್ವಾಗತ ನೀಡಲಾಯಿತು. ಬಳಿಕ ದೇವರ ದರ್ಶನ ಪಡೆದು ಪ್ರಾರ್ಥಿಸಿ ವಿಶೇಷ ನವಚಂಡಿಕಾ ಯಾಗದಲ್ಲಿ ಪಾಲ್ಗೊಂಡರು. ಬಳಿಕಮಹಾಪೂಜೆ ಪೂರೈಸಿ ಮರಳಿದರೆಂದು ದೇಗುಲದ ಅರ್ಚಕ ಡಾ.ನರಸಿಂಹ ಅಡಿಗ ಅವರು ತಿಳಿಸಿರುವರು.
ಶ್ರೀಲಂಕೆಯ ಅಭಿವೃದ್ದಿಯಾಗಬೇಕು, ರಾಜಕೀಯ ಸವಾಲುಗಳು ಎದುರಾಗಬಾರದು, ವೈಯುಕ್ತಿವಾಗಿ ರಾಜಕೀಯ ಏಳಿಗೆಯಾಗಬೇಕು ಎಂದು ಸಂಕಲ್ಪಿಸಲಾಗಿತ್ತೆಂದು ಕ್ಷೇತ್ರದ ಮೂಲಗಳು ತಿಳಿಸಿವೆ. ಗುರುವಾರ ಲಂಕಾ ಪ್ರಧಾನಿಯ ಹೆಸೆರಲ್ಲಿ ಪಾರಾಯಣ, ಕಲಶ ಸ್ಥಾಪನೆ ನಡೆದಿತ್ತು. ಬೆಳಿಗ್ಗೆ ನವಚಂಡಿಕಾ ಯಾಗ ಪ್ರಾರಂಭಗೊಂಡಿತ್ತು. ಮಧ್ಯಾಹ್ನ ಪೂರ್ಣಾಹುತಿ ನೆರವೇರಿತು.
ಶ್ರೀಲಂಕಾ ಪ್ರಧಾನಿಯ ಆಗಮನದ ಹಿನ್ನೆಲೆಯಲ್ಲಿ ಕೊಲ್ಲೂರಿನ ಅಂಗಡಿಮುಗ್ಗಟ್ಟುಗಳನ್ನು ಮಧ್ಯಾಹ್ನ ವರೆಗೆ ರಕ್ಷಣೆಯ ಕಾರಣ ಮುಚ್ಚಲಾಗಿತ್ತು. ಪ್ರಧಾನಿಯ ಭೇಟಿಯ ಹಿನ್ನೆಲೆಯಲ್ಲಿ ಭಾರೀ ಮುಂಜಾಗ್ರತೆಯ ಕ್ರಮ ಕೈಗೊಳ್ಳಲಾಗಿತ್ತು.
ಇಂದು ಕುಮಾರಮಂಗಲಕ್ಕೆ:
ಲಂಕಾ ಪ್ರಧಾನಿಗಳು ಇಂದು ಬೆಳಿಗ್ಗೆ ಬೇಳ ಕುಮಾರಮಂಗಲ ಶ್ರೀಕುಮಾರ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುವರು. ಬೆಳಿಗ್ಗೆ 9ಕ್ಕೆ ಆಗಮಿಸುವ ಅವರು ವಿಶೇಷ ಆಶ್ಲೇಷ ಪೂಜೆ ಸಹಿತ ವಿವಿಧ ಪೂಜಾದಿಗಳಲ್ಲಿ ಭಾಗಿಯಾಗಿ ಹತ್ತರ ವೇಳೆಗೆ ಹಿಂತಿರುಗುವರು. ಭೇಟಿಯ ಹಿನ್ನೆಲೆಯಲ್ಲಿ ಭಾರೀ ಬಂದೋಬಸ್ತ್ ಏರ್ಪಡಿಸಲಾಗಿದೆ.
ಶ್ರೀಲಂಕಾ ಪ್ರಧಾನಮಂತ್ರಿ ರನಿಲ್ ವಿಕ್ರಮ ಸಿಂಘೆ ಕುಂಬಳೆ ಸನಿಹದ ಬೇಳ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡುವ ನಿಟ್ಟಿನಲ್ಲಿ ಶುಕ್ರವಾರ ಜಿಲ್ಲೆಗೆ ಆಗಮಿಸಿದರು. ಬೇಕಲದ ಪಂಚನಕ್ಷತ್ರ ಹೋಟೆಲ್ ತಾಜ್ ವಿವಾಂಟಕ್ಕೆ ಹೆಲಿಕಾಪ್ಟರ್ ಮೂಲಕ ಸಾಯಂಕಾಲ ಆಗಮಿಸಿದ, ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಅವರನ್ನು ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ.ಸಜಿತ್ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್ ಸ್ವಾಗತಿಸಿ, ಬರಮಾಡಿಕೊಂಡರು.
ಜುಲೈ 27ರಂದು ಬೆಳಗ್ಗೆ 9ಕ್ಕೆ ಬೇಳ ಕುಮಾರಮಂಗಲ ದೇವಸ್ಥಾನದಲ್ಲಿ ನಡೆಯಲಿರುವ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನಂತರ ಮಂಗಳೂರಿಗೆ ವಾಪಸಾಗುವರು.


