ಕಾಸರಗೋಡು: ಸರ್ಕಾರಿ ನೌಕರಿ ಲಭ್ಯತೆಯಿಂದ ಕಾಸರಗೋಡು ಜಿಲ್ಲೆಯ ಉದ್ಯೋಗಾರ್ಥಿಗಳು ಹಿಂದುಳಿಯುತ್ತಿರುವ ಸ್ಥಿತಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಪಿ.ಎಸ್.ಸಿ. ಫೆಸಿಲಿಟೇಷನ್ ಸೆಂಟರ್ ನಿನ್ನೆ ಆರಂಭಗೊಂಡಿದೆ.
ಕೇರಳ ಲೋಕ ಸೇವಾ ಆಯೋಗದ ಸಹಕಾರದೊಂದಿಗೆ ಆರಂಭಿಸಲಾದ ಈ ಕೇಂದ್ರವನ್ನು ಶುಕ್ರವಾರ ನಡೆದ ಸಮಾರಮಭದಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಪ್ರಭಾಕರನ್ ಆಯೋಗ ವರದಿಯಲ್ಲಿ ತಿಳಿಸುರುವ ಪ್ರಕಾರ ಜಿಲ್ಲೆಯ ಸರಕಾರಿ ಇಲಾಖೆಗಳಲ್ಲಿ ಸ್ಥಳೀಯ ಸಿಬ್ಬಂದಿ ಕಡಿಮೆ ಇರುವುದು ಜಿಲ್ಲೆಯ ಹಿಂದುಳಿಯುವಿಕೆಗೆ ಪ್ರಧಾನ ಕಾರಣ. ಇದರ ಪರಿಹಾರಕ್ಕೆ ಒಗ್ಗಟ್ಟಿನ ಯತ್ನಗಳ ಅಗತ್ಯವಿದೆ. 1984 ರಿಂದ ಜಿಲ್ಲೆಯಲ್ಲಿ 29 ಸಾವಿರ ಮಂದಿ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೋಂದಣಿ ನಡೆಸಿದ್ದರೂ, ಇವರಲ್ಲಿ ಎಷ್ಟು ಮಂದಿಗೆಸರಕಾರಿ ಉದ್ಯೋಗ ಲಭಿಸಿದೆ ಎಂಬ ಬಗ್ಗೆ ಅನ್ವೇಷಣೆ ನಡೆಯಬೇಕು ಎಂದವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉದ್ಯೋಗ ಅಧಿಕಾರಿ ವಿ.ಕೆ.ಸಂತೋಷ್ ಕುಮಾರ್, ಜಿಲ್ಲಾ ವಾರ್ತಾ ಅಧಿಕಾರಿ ಮಧುಸೂದನನ್ ಎಂ., ಹೊಸದುರ್ಗ ಉದ್ಯೋಗ ವಿನಿಮಯ ಕೇಂದ್ರ ಅಧಿಕಾರಿ ಪಿ.ಟಿ.ಜಯಪ್ರಕಾಶ್, ಉದ್ಯೋಗ ಅಧಿಕಾರಿಗಳಾದ ಕೆ.ಗೀತಾಕುಮಾರಿ, ಎ.ಷೀಜಾ ಉಪಸ್ಥಿತರಿದ್ದರು. ಕೆ.ಪಿ.ಎಸ್.ಸಿ. ವಿಭಾಗ ಅಧಿಕಾರಿ ಬಿ.ರಾಧಾಕೃಷ್ಣ ತರಗತಿ ನಡೆಸಿದರು.


