ಕಾಸರಗೋಡು: ಮಳೆಯ ಅಬ್ಬರ ಕ್ಷೀಣಿಸಿದರೂ ರಾಜ್ಯದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಒಟ್ಟು ಸತ್ತವರ ಸಂಖ್ಯೆ 65 ಕ್ಕೇರಿದೆ. ಕಾಸರಗೋಡು ಜಿಲ್ಲೆಯಲ್ಲಿ 56 ಗ್ರಾಮಗಳಲ್ಲಿ ನೆರೆ ಸೃಷ್ಟಿಯಾಗಿದ್ದು, 3060 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಅಲ್ಲಲ್ಲಿ ಗುಡ್ಡೆ ಕುಸಿದಿದ್ದು, 303 ಮನೆಗಳು ಕುಸಿದು ಬಿದ್ದಿವೆ. ಮರಗಳು ಉರುಳಿ ಬಿದ್ದು, ವಿದ್ಯುತ್ ಕಂಬಗಳಿಗೆ, ತಂತಿಗಳಿಗೆ ಉಂಟಾದ ಹಾನಿಯಿಂದ ಇನ್ನೂ ವಿದ್ಯುತ್ ಸಮಸ್ಯೆ ಮುಂದುವರಿದಿದೆ. ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ಇನ್ನೂ ಮೊಟಕುಗೊಂಡಿದೆ.
ಎಡನೀರು ರಸ್ತೆಗೆ ಗುಡ್ಡೆ ಕುಸಿತ : ಎಡನೀರು ಬಳಿಯ ಚೂರಿಮೂಲೆಯಲ್ಲಿ ಗುಡ್ಡೆ ಕುಸಿದು ರಸ್ತೆಗೆ ಬಿದ್ದಿದೆ. ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ಪ್ರದೇಶದಲ್ಲಿದ್ದ ವಿದ್ಯುತ್ ಕಂಬಗಳು, ತಂತಿಗಳು ಮಣ್ಣಿನಡಿಯಲ್ಲಿ ಹೂತು ಹೋಗಿದೆ. ರಸ್ತೆಯಿಂದ ಮಣ್ಣನ್ನು ತೆರವುಗೊಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ರಸ್ತೆಗೆ ಗುಡ್ಡೆ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ಬಸ್ ಸಹಿತ ವಾಹನ ಸಂಚಾರ ಮೊಟಕುಗೊಂಡಿದೆ. ಆಲಂಪಾಡಿ ಮೂಲಕ ನೆಲ್ಲಿಕಟ್ಟೆಗೆ ತೆರಳಿ ಬದಿಯಡ್ಕ ಮೊದಲಾದ ಸ್ಥಳಗಳಿಗೆ ತಲುಪುತ್ತಿವೆ.
ಅಡೂರು ಪಳ್ಳಂಜಿ ಸಮೀಪ ಚಳ್ಳರಿಕಯದಲ್ಲಿ ಹೊಳೆಗೆ ನಿರ್ಮಿಸಿದ ಕಾಲ್ಸಂಕದ ಮೇಲೆ ನೀರು ತುಂಬಿ ಹರಿಯುತ್ತಿರುವುದರಿಂದ ಸ್ಥಳೀಯ ಜನರಿಗೆ ಸಂಚಾರ ಸಮಸ್ಯೆ ಉಂಟಾಗಿದೆ. ಪಾಂಡಿ, ಪಳ್ಳಂಜಿ, ಚಳ್ಳರಿಕಯ, ಬಾಳಕಯ ಮೊದಲಾದ ಪ್ರದೇಶದ ಸುಮಾರು 50 ಕುಟುಂಬಗಳಿಗೆ ಅಡೂರು ಮೊದಲಾದ ಪ್ರದೇಶಗಳನ್ನು ಸಂಪರ್ಕಿಸಬೇಕಾದರೆ ಚಳ್ಳರಿಕಯದ ಕಾಲ್ಸಂಕ ಮೂಲಕವೇ ಸಾಗಬೇಕು. ಎಣ್ಮಕಜೆಯ ಈಳಂತೋಡಿಯಲ್ಲಿ ಕಾಲುದಾರಿ ಕುಸಿದು ಬಿದ್ದಿದೆ. ಇದರಿಂದ ಈ ಪ್ರದೇಶದ ಜನರು ಸುತ್ತು ಬಳಸಿ ತೆರಳಬೇಕಾದ ಸ್ಥಿತಿ ಉಂಟಾಗಿದೆ.
ಪಿಲಾಂಕಟ್ಟೆ-ಮಾರ್ಪನಡ್ಕ ಮಧ್ಯೆ ಅಗಲ್ಪಾಡಿಯಲ್ಲಿ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಸಮೀಪ ಗುಡ್ಡೆ ಕುಸಿದು ರಸ್ತೆಗೆ ಬೀಳುವ ಸ್ಥಿತಿಯಲ್ಲಿದೆ. ಈ ಹಿಂದೆಯೂ ಇಲ್ಲಿ ಗುಡ್ಡೆ ಕುಸಿದು ರಸ್ತೆಗೆ ಬಿದ್ದಿತ್ತು. ಇದೀಗ ಮತ್ತೆ ಗುಡ್ಡೆ ಬಿರುಕು ಬಿಟ್ಟಿದ್ದು, ಅಪಾಯದ ಸ್ಥಿತಿಯಲ್ಲಿದೆ.
ಕರಿಂಬಿಲದಲ್ಲಿ ವಾಹನ ಸಂಚಾರ ಮೊಟಕು : ಕರಿಂಬಿಲದಲ್ಲಿ ಗುಡ್ಡೆ ಕುಸಿದು ರಸ್ತೆಗೆ ಬಿದ್ದ ಮಣ್ಣನ್ನು ತೆರವುಗೊಳಿಸಲು ಆರಂಭಿಸದಿರುವುದರಿಂದ ವಾಹನ ಸಂಚಾರ ಮೊಟಕು ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಚೆರ್ಕಳ-ಕಲ್ಲಡ್ಕ ಅಂತಾರಾಜ್ಯ ರಸ್ತೆಯಲ್ಲಿ ಕರಿಂಬಿಲ ಮೂಲಕ ವಾಹನ ಸಂಚಾರ ಮೊಟಕುಗೊಂಡಿದ್ದು, ಇದರಿಂದ ಕರಿಂಬಿಲ ಮೂಲಕ ಪೆರ್ಲಕ್ಕೆ ಸಂಪರ್ಕವಿಲ್ಲದಂತಾಗಿದೆ. ಕೆಎಸ್‍ಆರ್‍ಟಿಸಿ ಬಸ್‍ಗಳು ಬದಿಯಡ್ಕದಿಂದ ಕನ್ಯಪ್ಪಾಡಿ, ಏಳ್ಕಾನ, ಉಕ್ಕಿನಡ್ಕ ಮೂಲಕ ಪುತ್ತೂರಿಗೆ ತೆರಳುತ್ತಿವೆ.
ಬದಿಯಡ್ಕ ಪೆÇಯ್ಯೆಕಂಡದಲ್ಲಿ ನೆಕ್ಕರೆ ತಿರುವಿನಲ್ಲಿ ಗುಡ್ಡೆ ಕುಸಿದು, ವಿದ್ಯುತ್ ಎಚ್.ಟಿ. ಲೈನ್‍ಗೆ ಮರ ಬಿದ್ದಿದೆ. ಇದರಿಂದ ಸಂಚಾರಕ್ಕೆ ತಡೆಯುಂಟಾಗಿದೆ. ಮಧೂರು ಬನ್ನೂರಿನಲ್ಲಿ ಹೊಳೆ ಉಕ್ಕಿ ಹರಿಯುತ್ತಿರುವುದರಿಂದ ಹಲವು ಮನೆಗಳಿಗೆ ನೀರು ನುಗ್ಗಿದೆ. ಎಂಟು ಮನೆಗಳು ನೀರಿನಿಂದ ಆವೃತವಾಗಿದೆ. ಮಧೂರು ಪಟ್ಲದಲ್ಲಿ ಹಲವು ಮನೆಗಳು ನೀರಿನಿಂದಾವೃತಗೊಂಡಿದೆ. ಪಟ್ಲ, ಮೊಗರು, ಅರಮನ ವಳಪ್ಪು, ಬೂಡ್ ಮೊದಲಾದ ಸ್ಥಳಗಳ 30 ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ತಾಸಿಗೆ 45 ರಿಂದ 55 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿರುವುದರಿಂದ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಬಾರದೆಂದು ಬೆಸ್ತರಿಗೆ ಮುನ್ನೆಚ್ಚರಿಕೆ ನೀಡಿದೆ.
ಕಡಲ್ಕೊರೆತ : ಹಲವು ಕುಟುಂಬಗಳ ಸ್ಥಳಾಂತರ : ಮುಸೋಡಿ, ಮಣಿಮುಂಡ, ಹನುಮಾನ್‍ನಗರ ಮೊದಲಾದೆಡೆಗಳಲ್ಲಿ ಕಡಲ್ಕೊರೆತ ಮುಂದುವರಿದಿದ್ದು, 27 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಕೆಲವರು ತಮ್ಮ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಕೆಲವರನ್ನು ಉಪ್ಪಳ ಶಾಲೆ ಹಾಗು ಮಣಿಮುಂಡ ಶಾಲೆಯಲ್ಲಿ ಆರಂಭಿಸಿದ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಹನುಮಾನ್ ನಗರದಲ್ಲಿ ಸುಮಾರು 1 ಕಿ.ಮೀ. ಉದ್ದದ ರಸ್ತೆ ಸಂಪೂರ್ಣ ಸಮುದ್ರ ಪಾಲಾಗಿದೆ. ಜನರ ಸಂಚಾರವೇ ಕಡಿದು ಹೋಗಿದೆ. ಇಲ್ಲಿನ ಯಮುನ, ಜಯ ಕುಮಾರ್, ಸೀತಾಲಕ್ಷ್ಮಿ, ಜಯರಾಮ, ಕೇಶವ, ಲಕ್ಷ್ಮಿ, ಗಂಗಮ್ಮ, ಮಾಧವ, ಪಿ.ಮಾಧವ, ಯಶೋಧ ಮೊದಲಾದವರ ಮನೆಗಳು ಅಪಾಯದಂಚಿನಲ್ಲಿವೆ. ಸ್ಥಳಕ್ಕೆ ಈಗಾಗಲೇ ಜಿಲ್ಲಾಧಿಕಾರಿ ಡಾ.ಡಿ.ಸಜಿತ್‍ಬಾಬು, ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಮೊದಲಾದವರು ಭೇಟಿ ನೀಡಿದರು.
ಮುಳ್ಳೇರಿಯ: ಕುಂಬ್ಡಾಜೆ ಗ್ರಾ.ಪಂ. ವ್ಯಾಪ್ತಿಯ ಮೊಟ್ಟಕುಂಜ ಎಂಬಲ್ಲಿ ಭಾನುವಾರ ಕರುಣಾಕರ ಎಂ. ಅವರ ಮನೆಯ ಛಾವಣಿಗೆ ಬೃಹತ್ ಮರವೊಂದು ಬಿದ್ದು ಆಂಶಿಕ ಹಾನಿ ಉಂಟಾಗಿದೆ. ಘಟನೆಯಲ್ಲಿ ಕರುಣಾಕರ ಅವರ ಪತ್ನಿ ಯಶೋಧ ಅವರು ಗಾಯಗೊಂಡಿದ್ದಾರೆ. ಘಟನೆಯ ವಿವರ ತಿಳಿದು ಕಾರಡ್ಕ ಬ್ಲಾ.ಪಂ.ಅಧ್ಯಕ್ಷೆ ಓಮನಾ ರಾಮಚಂದ್ರನ್,ಸಹಾಯಕಿ ಉಷಾ ಸ್ಥಳಕ್ಕೆ ಭೇಟಿ ನೀಡಿರುವರು.


