ಕಾಸರಗೋಡು: ತೀವ್ರ ಕಳವಳಕಾರಿಯಾಗಿ ಅವಾಂತರ ಸೃಷ್ಟಿಸಿದ ಕುಂಭದ್ರೋಣ ಮಳೆ ಜಿಲ್ಲೆಯಲ್ಲಿ ಭಾನುವಾರ ಆಂಶಿಕವಾಗಿ ಕುಂಠಿತಗೊಂಡಿತ್ತು. ಶನಿವಾರ ರಾತ್ರಿಯಿಂದ ಭಾನುವಾರ ಮುಂಜಾನೆಯ ವರೆಗೆ ಮಳೆ ಆಗಿಲ್ಲ. ಆದರೆ ಭಾನುವಾರ ಮುಂಜಾನೆ ಒಂದಷ್ಟು ಹೊತ್ತು ಮತ್ತೆ ಬಿರುಸಿನ ಮಳೆ ಆರಂಭಗೊಂಡು ಆತಂಕ ಮೂಡಿಸಿತಾದರೂ ಅರ್ಧ ಗಂಟೆಯಲ್ಲಿ ಕುಸಿಯಿತು. ಬಳಿಕ ಅಪರಾಹ್ನ 1.30ರ ವೇಳೆ ಮಳೆಯಾಗಿದೆ. ಭಾನುವಾರತ ದಿನಪೂರ್ತಿ ಮೋಡ ಕವಿದ ವಾತಾವರಣವಿತ್ತು.
ಹಾನಿಗಳ ವಿವರ:
ಕಾಸರಗೋಡು ತಾಲೂಕಿನ 14, ಮಂಜೇಶ್ವರದ 4, ಹೊಸದುರ್ಗದ 23 ಹಾಗೂ ವೆಳ್ಳೆರಿಕುಂಡು ತಾಲೂಕಿನ 15 ಗ್ರಾಮಗಳು ನೆರೆ ಹಾವಳಿಗೆ ತುತ್ತಾಗಿದೆ.
ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಲ್ಲಿ ಒಟ್ಟು 864 ಕುಟುಂಬಗಳನ್ನುಸುರಕ್ಷಿತ ತಾಣಕ್ಕೆ ಸ್ಥಳಾಂತರಿಸಲಾಗಿದೆ. ಈ ಪೈಕಿ 3060 ಮಂದಿ ಒಳಗೊಂಡಿದ್ದಾರೆ. ಇವರೆಲ್ಲ ವಿವಿಧ ಪುನರ್ ವಸತಿ ಶಿಬಿರಗಳಲ್ಲಿ ಕಳೆಯುತ್ತಿದ್ದಾರೆ. ಹೊಸ ದುರ್ಗ ತಾಲೂಕಿನಲ್ಲಿ 19, ವೆಳ್ಳೆರಿಕುಂಡು ತಾಲೂಕಿನಲ್ಲಿ 9 ಮತ್ತು ಕಾಸರಗೋಡು ತಾಲೂಕಿನಲ್ಲಿ ಒಂದು ಪುನರ್ ವಸತಿ ಶಿಬಿರ ಏರ್ಪಡಿಸಲಾಗಿದೆ. ಜಿಲ್ಲೆಯ ಕಾರ್ಯಂಗೋಡ್, ತೇಜಸ್ವಿನಿ, ಚಂದ್ರಗಿರಿ, ಮೊಗ್ರಾಲ್ ಮತ್ತು ಪಯಸ್ವಿನಿ ಹೊಳೆಗಳ ನೀರಿನ ಮಟ್ಟ ಉಕ್ಕಿ ಹರಿದು ನದೀ ತಟಗಳಲ್ಲಿ ಪ್ರವಾಹ ಸೃಷ್ಟಿಯಾಗಿತ್ತು.
ಜಿಲ್ಲೆಯಲ್ಲಿ ನೆರೆಯ ಕಾರಣ ಶನಿವಾರ 102.898 ಹೆಕ್ಟೇರ್ ಕೃಷಿ ಭೂಮಿ ನಾಶಹೊಂದಿದೆ. ವೆಳ್ಳೆರಿಕುಂಡು ತಾಲೂಕಿನ ಕೋಟಿಕುನ್ನು ಎಂಬಲ್ಲಿ ಮನೆಯೊಂದರ ಮೇಲೆ ಗುಡ್ಡ ಕುಸಿದು ಜಾನಕಿ(65) ಮತ್ತು ಅವರ ಪತಿ ಅಂಬು(70) ಸೊಂಟದ ವರೆಗೆ ಮಣ್ಣುಗಳೆಡೆಯಲ್ಲಿ ಸಿಲುಕಿಕೊಂಡರು. ಬಳಿಕ ಅಗ್ನಿ ಶಾಮಕದಳ ಮತ್ತು ಸ್ಥಳೀಯ ನಾಗರಿಕರು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದರು. ಸತೀಶ ಎಂಬವರೂ ಇದೇ ಪರಿಸರದಲ್ಲಿ ಮಣ್ಣಿನಡಿ ಸಿಲುಕಿದ್ದರೂ ಅಪಾಯದಿಂದ ಪಾರಾಗಿದ್ದಾರೆ.
ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಶನಿವಾರ ಒಟ್ಟು 282 ಮನೆಗಳು ಆಂಶಿಕವಾಗಿಯೂ, 21 ಮನೆಗಳು ಪೂರ್ಣವಾಗಿ ಕುಸಿದು ಬಿದ್ದಿರುವುದಾಗಿ ಪ್ರಾಥಮಿಕ ವರದಿಗಳು ದೃಢಪಡಿಸಿವೆ.
ಕಾಸರಗೋಡು ತಾಲೂಕಿನ ಕಾರಡ್ಕ, ಅಡೂರು, ಕಳನಾಡು, ಚೆನ್ಮಾಡ್, ಕಾಸರಗೋಡು, ಕೂಡ್ಲು, ಮೊಗ್ರಾಲ್ ಪುತ್ತೂರು, ಮಧೂರು, ಪಟ್ಲ, ಮುಳಿಯಾರ್, ತಳಂಗೆರೆ, ತೆಕ್ಕಿಲ್, ಪೆರುಂಬಳ ಮತ್ತು ಅಡ್ಕತ್ತಬೈಲುಗಳೆಂಬ 14 ಗ್ರಾಮಗಳಲ್ಲಿ ನೆರೆ ಉಂಟಾಗಿದೆ.
ಮಂಜೇಶ್ವರ ತಾಲೂಕಿನ ಉಪ್ಪಳ, ಕೊಯಿಪ್ಪಾಡಿ, ವರ್ಕಾಡಿ ಮತ್ತು ಕೊಡ್ಲಮೊಗರು ಗ್ರಾಮಗಳಲ್ಲಿ ನೆರೆ ಉಂಟಾಗಿದೆ. ಜೊತೆಗೆ ಹೊಸ ದುರ್ಗ ತಾಲೂಕಿನ 23 ಮತ್ತು ವೆಳ್ಳೆರಿಕುಂಡು ತಾಲೂಕಿನ 15 ಗ್ರಾಮಗಳು ನೆರೆ ಹಾವಳಿಯಿಂದ ಸಂಕಷ್ಟ ಅನುಭವಿಸಿದೆ.
ಭಾನುವಾರ ಮಳೆಯ ಪ್ರಮಾಣ ಕುಸಿತಗೊಂಡಿರುವುದರಿಂದ ಹೊಳೆ, ತೋಡುಗಳ ಪ್ರವಾಹ ಮಟ್ಟ ನಿಧಾನವಾಗಿ ಕುಸಿಯತೊಡಗಿದೆ.
ಅಡೂರಿನಲ್ಲಿ ಮನೆ ಕುಸಿತ:
ಅಡೂರು ಬಳಿ ಮನೆಯೊಂದು ಕುಸಿದು ಬಿದ್ದು ಓರ್ವೆ ಮಹಿಳೆ ಗಂಭೀರ ಗಾಯಗೊಂಡಿದ್ದಾರೆ.
ಗಡಿ ಗ್ರಾಮ ದೇಲಂಪಾಡಿ ಗ್ರಾಮ ಪಂಚಾಯತಿಯ ಅಡೂರು ಏಳೂವರೆಗುಳಿ ಎಂಬಲ್ಲಿ ಶನಿವಾರ ಮಧ್ಯಾಹ್ನ ನಾರಾಜ ಭಟ್ ಎಂಬವರ ಮನೆಯ ಮಣ್ಣಿನ ಗೋಡೆಯ ಒಂದು ಪಾಶ್ರ್ವ ಹಠಾತ್ ಕುಸಿದಿದ್ದು, ಈ ವೇಳೆ ಮನೆಯ ಹಂಚಿನ ಛಾವಣಿ ಸಹಿತ ಮನೆಯ ಒಂದು ಪಾಶ್ರ್ವ ಕುಸಿಯಿತು. ಈವೇಳೆ ಮನೆಯೊಳಗಿದ್ದ ನಾಗರಾಜ ಭಟ್ ಅವರ ಸಹೋದರ ಪ್ರಭಾಕರ ಭಟ್ ಅವರ ಪತ್ನಿ ಶ್ಯಾಮಲಾ(60) ಗಂಭೀರ ಗಾಯಗೊಂಡರು. ಇವರನ್ನು ಕಾಸರಗೋಡಿನ ಜನರಲ್ ಆಸ್ಪತ್ರೆಗೆ ಬಳಿಕ ದಾಖಲಿಸಲಾಯಿತು.
ಕಾಲುದಾರಿ ಕುಸಿತ:
ಎಣ್ಮಕಜೆ ಗ್ರಾ.ಪಂ. ವ್ಯಾಪ್ತಿಯ ಈಳಂತೋಡಿ ಎಂಬಲ್ಲಿ ಕಾಲುದಾರಿ ಕುಸಿದಿದ್ದು, ಈ ಪ್ರದೇಶದ ಜನರು ಸುತ್ತುಬಳಸಿ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಗುಡ್ಡೆ ಕುಸಿತ&ಹಾನಿ:
ಬದಿಯಡ್ಕ ವಿದ್ಯಾಗಿರಿಯ ಮೇಲಿನ ಕಡಾರಿನಲ್ಲಿ ಗುಡ್ಡೆ ಕುಸಿದು ಮನೆ ಹಾಗೂ ಹಟ್ಟಿಗೆ ಹಾನಿಯಾಗಿದೆ. ಇಲ್ಲಿಯ ರಾಜೀವಿ ಎಂಬವರ ಮನೆಯ ಹಿಂಭಾಗದ ಗುಡ್ಡೆ ಶನಿವಾರ ರಾತ್ರಿ ಕುಸಿದು ಹಟ್ಟಿಯ ಮೇಲೆ ಬಿದ್ದು ಗೋಡೆ ಕುಸಿದಿದೆ. ಹಟ್ಟಿಯಲ್ಲಿ ಹಸುಗಳನ್ನು ಕೂಡಲೇ ಸ್ಥಳಾಂತರಿಸಿದ್ದರಿಂದ ಅಪಾಯಗಳಿಲ್ಲದೆ ಪಾರಾಗಿದೆ.
ಕುಳದಪಾರೆಯಲ್ಲಿ ಮನೆ ಕುಸಿತ:
ಬೆಳ್ಳೂರು ಕುಳದಪಾರೆ ಬಳಿಯ ನಿದಿಯಡ್ಕ ಎಂಬಲ್ಲಿ ಸುಬ್ಬ ನಾಯ್ಕ ಎಂಬವರ ಮನೆ ಶನಿವಾರ ಸಂಜೆ ಭಾರೀ ಮಳೆಯ ಕಾರಣ ಕುಸಿಯಿತು. ಮನೆಗೆ ಆಂಶಿಕ ಹಾನಿಯಾಗಿದ್ದು, ಜೀವಾಪಾಯಗಳು ಉಂಟಾಗಿಲ್ಲ.




