ಕುಂಬಳೆ: ಶಾಲೆಗಳಲ್ಲಿ ಮಾಹಿತಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಶಿಕ್ಷಣ ನೀಡುವುದರ ಮೂಲಕ ಮಕ್ಕಳಿಗೆ ಅಂತಹ ಉಪಕರಣಗಳನ್ನು ಉಪಯೋಗಿಸುವ ನೈಪುಣ್ಯ ಸಿದ್ಧಿಸುವುದರ ಜೊತೆಗೆ ಪ್ರಪಂಚದ ಮೂಲೆಮೂಲೆಗಳಲ್ಲಿ ನಡೆಯುವ ವೈವಿಧ್ಯಮಯವಾದ ವಿದ್ಯಮಾನಗಳನ್ನು ಜೀವಂತವಾಗಿ ಕಾಣುವ ಅನುಭವವನ್ನು ಪಡೆಯಲು ಸಾಧ್ಯವಿದೆ ಎಂದು ಕುಂಬಳೆ ಗ್ರಾಮ ಪಂಚಾಯತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷರಾದ ಎಕೆ ಆರಿಫ್ ಹೇಳಿದರು.
ಅವರು ಪೇರಾಲು ಸರಕಾರಿ ಕಿರಿಯ ಬುನಾದಿ ಶಾಲೆಯಲ್ಲಿ ಕೇರಳ ಸರಕಾರದ ಶಿಕ್ಷಣ ಇಲಾಖೆಯ ಭೌತಿಕ ಸೌಕರ್ಯ ಮತ್ತು ತರಬೇತಿ ಸಂಸ್ಥೆ ಕೊಡಮಾಡಿದ ಉನ್ನತ ತಂತ್ರಜ್ಞಾನ ಉಪಕರಣಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಶಾಲೆಯ ಪ್ರಗತಿಯನ್ನು ಪರಿಗಣಿಸಿ ಪ್ರತಿಯೊಂದು ತರಗತಿಯಲ್ಲೂ ಅಳವಡಿಸುವಷ್ಟರ ಮಟ್ಟಿಗೆ ಇನ್ನಷ್ಟು ಇಂತಹ ಉಪಕರಣಗಳು ಸಿಗುವಂತಾಗಲಿ ಎಂದು ಹಾರೈಸಿದರು. ಕುಂಬಳೆ ಗ್ರಾಮ ಪಂಚಾಯತ್ ಸದಸ್ಯ ಮೊಹಮ್ಮದ್ ಕುಂಞÂ ಶುಭಹಾರೈಸಿದರು. ಪಿಟಿಎ ಅಧ್ಯಕ್ಷ ಮೊಹಮ್ಮದ್ ಬಿಎ ಪೇರಾಲು ಅಧ್ಯಕ್ಷತೆ ವಹಿಸಿದರು. ಮುಖ್ಯ ಶಿಕ್ಷಕ ಗುರುಮೂರ್ತಿ ಸ್ವಾಗತಿಸಿ, ವಿನುಕುಮಾರ್ ಮಾಸ್ತರ್ ವಂದಿಸಿದರು. ಪ್ರಸೀನ ಟೀಚರ್ ಕಾರ್ಯಕ್ರಮ ನಿರೂಪಿಸಿದರು.


