ಕಾಸರಗೋಡು: ಹುಟ್ಟಿನಿಂದ ಕೊನೆಯ ತನಕ ಶ್ರೀ ಕೃಷ್ಣನ ಪ್ರತಿಯೊಂದು ನಡೆನುಡಿ ಅತಿ ರೋಚಕ. ಶ್ರೀಕೃಷ್ಣನ ಬಾಲ ಲೀಲೆಯ ಪ್ರತಿಯೊಂದು ಘಟನೆಯಲ್ಲೂ ಸಮಾಜವನ್ನು ತಿದ್ದುವ ಕಾರ್ಯ ನಡೆದಿದೆ. ಸಾಮಾನ್ಯರಲ್ಲಿ ಸಾಮಾನ್ಯನಾಗಿ ಜನ್ಮವೆತ್ತಿದ ಭಗವಂತ ಜನರ ಮಧ್ಯೆ ಇದ್ದು ಸಮಾಜದ ಅಂಕಡೊಂಕುಗಳನ್ನು ತಿದ್ದುವ ಜತೆ ಜಗತ್ತಿಗೇ ಮಾರ್ಗದರ್ಶಕನಾಗಿದ್ದಾನೆ ಎಂದು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ನುಡಿದರು.
ಅವರು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಜರಗಿದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವದಂಗವಾಗಿ ಹಮ್ಮಿಕೊಂಡ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಮುದ್ದು ಕೃಷ್ಣನ ವೇಷ ಭೂಷಣದಲ್ಲಿ ತಮ್ಮ ಮಕ್ಕಳಲ್ಲಿ ಶ್ರೀ ಕೃಷ್ಣನ ರೂಪ ಸಾದೃಶ್ಯವನ್ನು ಕಾಣುವ ಹೆತ್ತವರು ತಮ್ಮ ಮಕ್ಕಳಿಗೂ ಶ್ರೀಕೃಷ್ಣ ಶ್ರೀರಾಮಚಂದ್ರನ ನೀತಿ ಗುಣಗಳನ್ನು ಉಣಬಡಿಸಿ ಅವರನ್ನು ಆದರ್ಶ ವ್ಯಕ್ತಿಗಳನ್ನಾಗಿಸುವಲ್ಲಿ ಮುಂದಾಗಬೇಕಾಗಿದೆ. ಹೀಗಾದಲ್ಲಿ ಮಾತ್ರ ನಮ್ಮ ಸಮಾಜ, ದೇಶ ಧರ್ಮ ಉಳಿಯುವುದಕ್ಕೆ ಸಾಧ್ಯ ಎಂದು ಹೇಳಿದರು.
ದೇವಸ್ಥಾನದ ಅನುವಂಶಿಕ ಮೊಕ್ತೇಸರ ಕೆ.ಜಿ.ಶ್ಯಾನುಭೋಗ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಹಿರಿಯ ಧಾರ್ಮಿಕ ಮುಂದಾಳು ರಾಮ್ ಪ್ರಸಾದ್ ಕಾಸರಗೋಡು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಿದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ಗೌರವ ಡಾಕ್ಟರೇಟ್ ಪಡೆದ ಅಂತಾರಾಷ್ಟ್ರೀಯ ಖ್ಯಾತಿಯ ಸ್ಯಾಕ್ಸೋಫೆÇೀನ್ ವಾದಕ ಉದಯ ಕುಮಾರ್ ಕಾಸರಗೋಡು ಅವರನ್ನು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಿದರು.
ಅಷ್ಟಮಿ ಉತ್ಸವದಂಗವಾಗಿ ಹಮ್ಮಿಕೊಂಡ ಬೌದ್ಧಿಕ ಸ್ಪರ್ಧೆಗಳ ಉದ್ಘಾಟನೆಯನ್ನು ಕ್ಷೇತ್ರದ ಪ್ರಧಾನ ಅರ್ಚಕ ಶ್ರೀಪತಿ ಅಡಿಗ ನೆರವೇರಿಸಿದರು. ಬಳಿಕ ಕೃಷ್ಣ ಅಡಿಗ ಕೂಡ್ಲು ಅವರ ನೇತೃತ್ವದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ ನಡೆಯಿತು. ಕೆ.ಸುರೇಶ್ ಮಣಿಯಾಣಿ ಸ್ವಾಗತಿಸಿ, ವೇಣುಗೋಪಾಲ್ ಮಾಸ್ತರ್ ಕೂಡ್ಲು ವಂದಿಸಿದರು. ಕೆ.ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ರಾತ್ರಿ ಜಂದ್ರೋದಯಕ್ಕೆ ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವರಿಗೆ ಕ್ಷೀರಾಭಿಷೇಕ ಮತ್ತು ಮಹಾಪೂಜೆ ನಡೆಯಿತು.


