ಉಪ್ಪಳ: ನಂದಾರಪದವು-ತಿರುವನಂತಪುರ ಮಲೆನಾಡು ಹೆದ್ದಾರಿಯ ಭಾಗವಾದ ಪೈವಳಿಕೆ ಚೇವಾರು ರಸ್ತೆ ಕಾಮಗಾರಿ ಕಳೆದ ಜನವರಿ ತಿಂಗಳಲ್ಲಿ ಆರಂಭಗೊಂಡಿದೆ.ಈ ಕಾಮಗಾರಿ ಆರಂಭವಾದಾಗಿನಿಂದಲೂ ಪೈವಳಿಕೆ ದೂರವಾಣಿ ಕೇಂದ್ರದ ಚೇವಾರು ಭಾಗದ ದೂರವಾಣಿಗಳು ಹಲವು ಬಾರಿ ನಿಶ್ಚಲಗೊಂಡು ಗ್ರಾಹಕರು ಸಂಕಷ್ಟ ಪಡುವಂತಾಗಿದೆ.
ಜೆಸಿಬಿ ಯಂತ್ರದಿಂದ ರಸ್ತೆ ಅಗಲಗೊಳಿಸುವಾಗ ರಸ್ತೆ ಪಕ್ಕದಲ್ಲಿ ಅಳವಡಿಸಿದ ದೂರವಾಣಿ ಕೇಬಲ್‍ಗಳು ಕಡಿತಗೊಂಡು ಈ ಪ್ರದೇಶದ ಸುಮಾರು 100 ರಷ್ಟು ದೂರವಾಣಿಗಳು ಪೂರ್ತಿ ಸ್ತಬ್ಧಗೊಳ್ಳುತ್ತಿದೆ. ಈ ಕುರಿತು ದೂರವಾಣಿ ಫಲಾನುಭವಿಗಳು ಅಧಿಕಾರಿಗಳಿಗೆ ದೂರು ನೀಡಿದರೂ ಕೆಲವು ದಿನಗಳು ಕಳೆದ ಬಳಿಕವೇ ಮತ್ತೆ ಸಂಪರ್ಕ ನೀಡಲಾಗುತ್ತಿದೆ.
ಇದೀಗ ಒಂದು ವಾರದಿಂದ ಚೇವಾರು ಭಾಗದ ದೂರವಾಣಿಗಳು ಪೂರ್ತಿ ಸ್ತಬ್ಧಗೊಂಡಿದೆ. ಬಿಎಸ್‍ಎನ್‍ಎಲ್ ಗ್ರಾಹಕರು ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಫಲಕಾರಿಯಾಗಿಲ್ಲ. ಕಡಿದ ಕೇಬಲ್ ದುರಸ್ತಿ ಪಡಿಸಲು ಇನ್ನೂ ವಾರಗಳ ಕಾಲ ಬೇಕೆಂಬ ಉತ್ತರ ಅಧಿಕಾರಿಗಳದು.
ಗುತ್ತಿಗೆದಾರರ ದರ್ಪ: ಪೈವಳಿಕೆ ನಗರ ಹೈಯರ್ ಸೆಕೆಂಡರಿ ವಿದ್ಯಾಲಯದಲ್ಲಿ ಈ ಬಾರಿ ಮಂಜೇಶ್ವರ ವಿಧಾನಸಭಾ ಉಪಚುನಾವಣೆಯ ಮತಎಣಿಕೆ ನಡೆದಿದ್ದು, ಇಲ್ಲಿಂದಲೇ ಚುನಾವಣೆಗಿರುವ ಎಲ್ಲಾ ಸಲಕರಣೆಗಳನ್ನು ವಿತರಿಸಲಾಗಿದೆ. ಚುನಾವಣೆಯ ಕಾರ್ಯಾಚರಣೆಗೆ ದೂರವಾಣಿ ಸಂಪರ್ಕ ಸಮರ್ಪಕವಾಗಿರಬೇಕೆಂಬ ನೆಲೆಯಲ್ಲಿ ಚುನಾವಣೆ ನಡೆಯಲಿರುವ ಮೂರು ದಿನಕ್ಕೆ ಮೊದಲು ರಸ್ತೆ ಕಾಮಗಾರಿ ನಡೆಸಬಾರದೆಂಬುದಾಗಿ ಜಿಲ್ಲಾಧಿಕಾರಿಯವರು ಲಿಖಿತ ಆದೇಶ ನೀಡಿದ್ದರು. ಆದರೆ ಇದನ್ನು ಗುತ್ತಿಗೆದಾರರು ಗಣನೆಗೆ ತೆಗೆಯದೆ ರಸ್ತೆ ಕಾಮಗಾರಿ ನಡೆಸಿ ಚುನಾವಣೆಗೆ ಎರಡು ದಿನ ಮೊದಲು ಪೈವಳಿಕೆಯಿಂದ ಚೇವಾರಿನ ತನಕದ 3 ಕೀ.ಮಿ ಕೇಬಲ್‍ಗಳು ಕಡಿದು ಹೋಗಿದೆ. ಇದು ಸದ್ಯ ದುರಸ್ಥಿತಿಗೊಳಿಸಲು ಸಾಧ್ಯವಾಗದೆಂದು ಬಿಎಸ್‍ಎನ್‍ಎಲ್ ಕೈಚೆಲ್ಲಿದೆ. ಕಡಿದು ಹೋದ ಕೇಬಲ್ ಅಳವಡಿಸಲು ದೂರವಾಣಿ ಇಲಾಖೆಯಲ್ಲಿ ಕೇಬಲ್ ಇಲ್ಲವೆಂಬ ಅಸಹಾಯಕತೆಯ ಉತ್ತರ ಅಧಿಕಾರಿಗಳದು. ಈ ಹಿಂದೆಯೇ ಖಾಸಗೀ ಮೊಬೈಲ್‍ಗಳ ಕೇಬಲ್ ಹೊಂಡ ಕಾಮಗಾರಿ, ಪೈವಳಿಕೆ ಗ್ರಾಮ ಪಂಚಾಯತಿನ ಜಲನಿಧಿ ಯೋಜನೆಗೆ ಚರಂಡಿ ನಿರ್ಮಾಣ ಇತ್ಯಾದಿ ಕಾಮಗಾರಿಯಲ್ಲಿ ದೂರವಾಣಿ ಕೇಬಲ್ ಸಾಕಷ್ಟು ಬಾರಿ ಕಡಿದು ಹೋಗಿ ಇದನ್ನು ಜೋಡಿಸಲಾಗಿದೆ. ಇದರಿಂದಲಾಗಿ ಕೆಲವು ದೂರವಾಣಿ ಮತ್ತು ಅಂತರ್ಜಾಲ ಸಂಪರ್ಕ ಸಮರ್ಪಕವಾಗಿರದೆ ಕೆಲವು ಗ್ರಾಹಕರು ದೂರವಾಣಿ ಸಂಪರ್ಕವೇ ಬೇಡವೆಂಬ ನಿಲುವಿನಲ್ಲಿ ಸಂಪರ್ಕ ಕಡಿತಗೊಳಿಸಿರುವರು. ಇದೀಗ ಮತ್ತಷ್ಟು ಗ್ರಾಹಕರು ಈ ದೂರವಾಣಿ ಬೇಡಪ್ಪಾ ಎಂಬ ನಿಲುವು ತಾಳಿ ತಮ್ಮ ಸಂಪರ್ಕ ಕಡಿತಗೊಳಿಸಲು ಮುಂದಾಗಿರುವರು.
ಇಲಾಖೆಯ ನಿರ್ಲಕ್ಷ್ಯ: ರಸ್ತೆ ಕಾಮಗಾರಿ ಗುತ್ತಿಗೆದಾರರ ಬೇಜಾವಾದ್ದಾರಿಯಿಂದ ನಡೆಯುವ ಅನಾಹುತವನ್ನು ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದುದರಿಂದ ಈ ರೀತಿಯ ಅನಾಹುತಗಳು ಪುನರಾವರ್ತಿಸುತ್ತಿದೆ. ಗುತ್ತಿಗೆದಾರರ ಮೇಲೆ ತಕ್ಕ ಸಮಯದಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತಿದ್ದಲ್ಲಿ ಮತ್ತೆ ಮತ್ತೆ ಕೇಬಲ್ ಕಡಿತಗೊಳ್ಳುವುದು ತಪ್ಪುತ್ತಿತ್ತು. ಇದೀಗ ದೂರವಾಣಿ ಗ್ರಾಹಕರು ಜಿಲ್ಲಾಧಿಕಾರಿಯವರಿಗೆ ದೂರು ಸಲ್ಲಿಸಿ ಸಮಸ್ಯೆಯನ್ನು ಪರಿಹರಿಸುವಂತೆ ಒತ್ತಾಯಿಸಿರುವರು.


