ಕುಂಬಳೆ: ಮಂಜೇಶ್ವರ ವಿಧಾನ ಸಭಾ ಕ್ಷೇತ್ರಕ್ಕೆ ಅ.21 ರಂದು ನಡೆಯಲಿರುವ ಉಪ ಚುನಾವಣೆಯ ಭಾಗವಾಗಿ ಭಾರತೀಯ ಜನತಾ ಯುವಮೋರ್ಚಾ ನೇತೃತ್ವದಲ್ಲಿ ಯುವ ಸಮಾವೇಶ ಮಂಗಳವಾರ ಅಪರಾಹ್ನ ಕುಂಬಳೆಯಲ್ಲಿ ನಡೆಯಿತು.
ಯುವ ಮೋರ್ಚಾದ ಜಿಲ್ಲಾಧ್ಯಕ್ಷ ರಾಜೇಶ್ ಕೈಂದಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶವನ್ನು ಯುವಮೋರ್ಚಾ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಬಿಜೆಪಿ ಚುನಾವಣೆಗೆ ಸ್ಪರ್ಧಿಸುವುದು ಕೇವಲ ಗೆಲುವಿನ ಮೂಲಕ ಅಧಿಕಾರ ಪಡೆಯಲು ಮಾತ್ರ ಅಲ್ಲ. ಗೆಲುವಿನ ಮೂಲಕ ಸಮಾಜ, ರಾಜ್ಯ,ರಾಷ್ಟ್ರವನ್ನು ಸಂಪದ್ಬರಿತ, ಶಾಂತಿ-ನೆಮ್ಮದಿಯಿಂದ ಬದಲಾಯಿಸಲು ಎಮದು ತಿಳಿಸಿದರು. ವ್ಯರ್ಥ ಕಾನೂನುಗಳ ಮೂಲಕ ಕಳೆದ ಹಲವು ದಶಕಗಳಿಂದ ರಾಷ್ಟ್ರವನ್ನು ದೋಚಿದ ಕಾಂಗ್ರೆಸ್ಸ್ ಮತ್ತು ಇತರ ಪಕ್ಷಗಳು ದೇಶವನ್ನು ಒಡೆಯುವ ಯತ್ನದಲ್ಲಿ ಈಗ ಮಗ್ನವಾಗಿವೆ. ಆದರೆ ಬಿಜೆಪಿ ಸ್ವಾಭಿಮಾನಿ ರಾಷ್ಟ್ರಪ್ರೇಮಿಗಳ ಧ್ವನಿಯಾಗಿ ರಾಷ್ಟ್ರವನ್ನು ಪುನಃನಿರ್ಮಿಸಿ ವಿಶ್ವಮಟ್ಟದಲ್ಲಿ ಗೌರವಿಸುವಂತೆ ಮಾಡಿದೆ ಎಂದರು. ಶಬರಿಮಲೆಯಂತಹ ಪುಣ್ಯ ಭೂಮಿಯಲ್ಲಿ ಅನುಷ್ಠಾನಗಳಿಗೆ ತಿಲಾಂಜಲಿ ನೀಡಹೊರಟ ಕೇರಳದ ಎಡರಂಗ ಅಸಂಖ್ಯ ಧರ್ಮ ವಿಶ್ವಾಸಿಗಳ ನಂಬಿಕೆ ಕಳೆದುಕೊಂಡಿದೆ ಎಂದ ಅವರು, ಜಾಗೃತ ಹಿಂದೂ ಸಮಾಜ ಸಮಗ್ರ ಬದಲಾವಣೆಗಾಗಿ ಕೇರಳದಲ್ಲೂ ಹಪಹಪಿಸುತ್ತಿರುವುದು ಸದ್ಯದ ವರ್ತಮಾನವಾಗಿದೆ. ಈ ನಿಟ್ಟಿನಲ್ಲಿ ಅಭಿವೃದ್ದಿಯ ಪಥದತ್ತ ಕೇರಳವನ್ನು ಮುನ್ನಡೆಸಲು ಬಿಜೆಪಿ ಅಧಿಕಾರಕ್ಕೇರಬೇಕು. ಇದು ಗಡಿನಾಡಾದ ಮಂಜೇಶ್ವರದಿಂದ ಆರಂಭಗೊಳ್ಳಬೇಕು ಎಂದರು.
ಗಡಿನಾಡು ಮಂಜೇಶ್ವರ ಕನ್ನಡದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಜನ್ಮ ನೆಲವಾಗಿ ಅಮೂಲ್ಯ ಕಾಣ್ಕೆ ನೀಡಿದ ವಿಶೇಷತೆ ಹೊಂದಿದೆ. ಇಲ್ಲಿಯ ಯಕ್ಷಗಾನ, ಸಂಗೀತ, ಸಾಂಸ್ಕøತಿಕ, ಸಾಹಿತ್ತಿಕ ಸೇವೆಗಳು ಬಹುಭಾಷಾ ನೆಲೆಯಲ್ಲಿ ಅಪೂರ್ವವಾದುದು. ಆದರೆ ಇಲ್ಲಿ ಈವರೆಗೆ ಆಳಿದವರ ದುರಾಡಳಿತದ ಫಲವಾಗಿ ಇಲ್ಲಿಯ ಯುವ ಸಮೂಹ ಉದ್ಯೋಗ, ಶಿಕ್ಷಣ ಸಹಿತ ಜೀವನ ನಿರ್ವಹಣೆಗೆ ಅನ್ಯ ಪ್ರದೇಶಗಳನ್ನು ಆಶ್ರಯಿಸಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಇನ್ನಾದರೂ ಬದಲಾವಣೆಯ ಶಖೆ ಆರಂಭಗೊಳ್ಳಬೇಕೆಂದರು. ಕಾಸರಗೋಡಿನ ಕನ್ನಡ ಭಾಷೆ, ಸಂಸ್ಕøತಿಯನ್ನು ಹೊಸಕಿ ಹಾಕುವ ಯತ್ನದಲ್ಲಿ ಯುಡಿಎಫ್ ಮತ್ತು ಎಲ್‍ಡಿಎಫ್ ಸರ್ಕಾರಗಳು ಜನರನ್ನು ವಂಚಿಸುತ್ತಿದೆ. ಬೆಂಗಳೂರಲ್ಲಿ ಅಲ್ಲಿ ವಿವಿಧ ಕಾರಣಗಳಿಂದ ವಾಸಿಸುವ ಮಲೆಯಾಳಿಗರು-ಕನ್ನಡಿಗರು ಜೊತೆಯಾಗಿ ಓಣಂ ಹಬ್ಬವನ್ನು ಆಚರಿಸುತ್ತಾರೆ. ಆದರೆ ಕಾಸರಗೋಡಲ್ಲಿ ದಸರಾ ಸಹಿತ ಕನ್ನಡ ಹಬ್ಬಾಚರಣೆ, ಕನ್ನಡ ಕಲಿಕೆಯನ್ನು ಹೊಸಕುವ ಯತ್ನವನ್ನು ಎಡರಂಗ ಮಾಡುತ್ತಿದೆ. ಇಂತಹ ಕಾಪಟ್ಯಕ್ಕೆ ಜನರು ತಕ್ಕ ಉತ್ತರ ನೀಡಬೇಕು ಎಂದು ತೇಜಸ್ವಿ ಸೂರ್ಯ ಕರೆನೀಡಿದರು.
ಮಹಿಳಾ ಮೋರ್ಚಾ ಕೇರಳ ಪ್ರಧಾನ ಕಾರ್ಯದರ್ಶಿ, ಖ್ಯಾತ ವಾಗ್ಮಿ ಶೋಭಾ ಸುರೇಂದ್ರನ್ ಮಾತನಾಡಿದರು. ಈ ಸಂದರ್ಭ ಬಿಜೆಪಿ ಪಕ್ಷ ಸೇರ್ಪಡೆಗೊಂಡ ಮುಸ್ಲಿಂ ಕಾರ್ಯಕರ್ತರನ್ನು ಸ್ವಾಗತಿಸಲಾಯಿತು. ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯರಾದ ಎಂ.ಸಂಜೀವ ಶೆಟ್ಟಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ವಿ.ಕೆ.ಸಜೀವನ್, ರಾಜ್ಯ ಸಮಿತಿ ಸದಸ್ಯರಾದ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ವಿ.ಬಾಲಕೃಷ್ಣ ಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಕೆ.ಶ್ರೀಕಾಂತ್, ಬಿಜೆಪಿ ಕಣ್ಣೂರು ಜಿಲ್ಲಾ ಮುಖಂಡ ಕೆ.ಪಿ.ಅಬ್ದುಲ್ಲ ಕುಟ್ಟಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ವೇಲಾಯುಧನ್, ಪಿ.ರಮೇಶ್, ಮುಖಂಡರಾದ ಬಿಜು ಎಳಕ್ಕುಳಿ, ಎ.ಕೆ.ಕಯ್ಯಾರ್, ಪುಷ್ಪಾಮೆಕ್ಕಳ,,, ಸತ್ಯಶಂಕರ ಭಟ್ ಹಿಳ್ಳೆಮನೆ, ಗೋಪಾಲ ಶೆಟ್ಟಿ ಅರಿಬೈಲು ಮೊದಲಾದವರು ಉಪಸ್ಥಿತರಿದ್ದರು. ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಮಿತ್ ರಾಜ್ ಪೆರ್ಲ ಸ್ವಾಗತಿಸಿ, ವಂದಿಸಿದರು.


