ಮಂಜೇಶ್ವರ: ಮಂಜೇಶ್ವರ ವಿಧಾನ ಸಭಾ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಗಡಿಪ್ರದೆಶದಲ್ಲಿ ವಾಹನ ತಪಾಸಣೆಯನ್ನು ಬಿಗಿಗೊಳಿಸುವಂತೆ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲಾಧಿಕಾರಿಗಳ ಇತ್ತೀಚೆಗೆ ನಡೆದ ಜಂಟಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಕಾಸರಗೊಡು ಜಿಲ್ಲೆಯ ಗಡಿ ಪ್ರದೇಶಗಳಲ್ಲಿರುವ ಗೂಂಡಾಗಳು, ದೀರ್ಘಕಾಲ ಕೇಸಿಗೆ ಹಾಜರಾಗದೆ ಪೊಲೀಸರ ಕಣ್ತಪ್ಪಿಸಿ ಗೂಂಡಾ ಕ್ರಮಣಗಳಲ್ಲಿ ತೊಡಗಿಸಿಕೊಂಡಿರುವ ಆರೋಪಿಗಳ ಪಟ್ಟಿಯನ್ನು ದಕ್ಷಿಣ ಕನ್ನಡದ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಇಂತಹ ಸಮಾಜದ್ರೋಹಿಗಳ ಅಟ್ಟಹಾಸವನ್ನು ಉಪಚುನಾವಣೆಯಲ್ಲಿ ನಿಯಂತ್ರಿಸುವಂತೆ ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧಿಕಾರಿಗಳಲ್ಲಿ ವಿನಂತಿಸಿಕೊಂಡರು.
ಗಡಿಪ್ರದೇಶಗಳಲ್ಲಿ ಸಾಧಾರಣವಾಗಿ ಗಲಭೆ ಎಬ್ಬಿಸುತ್ತಿರುವ ಅಪರಾಧಿಗಳನ್ನು ಬಂಧಿಸುವಂತೆಯೂ ನಿರ್ದೇಶಿಸಲಾಗಿದೆ. ಗಡಿ ಪ್ರದೇಶದಲ್ಲಿ ಉಪಚುನಾವಣೆ ಮುಗಿಯುವ ತನಕವೂ ವಾಹನ ತಪಾಸಣೆ ನಡೆಸಲಾಗುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

