ಕುಂಬಳೆ: ಮಂಜೇಶ್ವರ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಯುಡಿಎಫ್ ಪಕ್ಷಗಳ ಮಧ್ಯೆ ಉಂಟಾಗಿರುವ ರಾಜಕೀಯ ಒಳ ಒಪ್ಪಂದಗಳ ಬಗ್ಗೆ ನಾನು ಈ ಸಂದರ್ಭ ಏನ್ನೂ ಹೇಳಲಾರೆ. ಹಿಂದುತ್ವ ಪೂರ್ಣ ಉಸ್ತುವಾರಿ ಹೊಣೆಯನ್ನು ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲರಿಗೆ ಯಾರು ನೀಡಿದವರು ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವ್ಯಂಗ್ಯವಾಗಿ ಪ್ರಶ್ನಿಸಿದರು.
ಮಂಜೇಶ್ವರ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಎಲ್ ಡಿ ಎಫ್ ಅಭ್ಯರ್ಥಿ ಶಂಕರ ರೈ ಅವರ ಪರವಾಗಿ ಶನಿವಾರ ಸೀತಾಂಗೋಳಿ ಸಮೀಪದ ಪುತ್ತಿಗೆ ಖತೀಬ್ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನ ಭಾಷಣಗೈದು ಅವರು ಮಾತನಾಡಿದರು.
ಯುಡಿಎಫ್ ಪಕ್ಷವು ಎಡಪಕ್ಷದ ಅಭ್ಯರ್ಥಿಯನ್ನು ವೈಯುಕ್ತಿಕ ನೆಲೆಯಲ್ಲಿ ಟೀಕಿಸುತ್ತಿರುವುದು ಗಮನಕ್ಕೆ ಬಂದಿದೆ. ಎಡಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶಂಕರ ರೈ ಅವರು ದೇವರ ಭಕ್ತರಾಗಿರುವುದು ಎದುರಾಳಿಗಳ ತಲೆನೋವಾಗಿ ಪರಿಣಮಿಸಿದೆ. ಆದರೆ ಶಂಕರ ರೈ ಅವರು ಒಬ್ಬ ದೇವರ ಭಕ್ತನಾಗಿರುವುದರಿಂದ ಇತರರಿಗೆ ಏನು ಕೊರತೆಯಾಗಿದೆ ಎನ್ನುವುದನ್ನು ಬಹಿರಂಗಪಡಿಸಬೇಕು ಎಂದು ಪಿಣರಾಯಿ ವಿಜಯನ್ ತಿಳಿಸಿದರು. ಸೋಲಿನ ಭಯದಲ್ಲಿ ಎಡ ಅಭ್ಯರ್ಥಿಯ ವಿರುದ್ದ ಆರೋಪಗಳನ್ನು ಮಾಡಲಾಗುತ್ತಿದೆ. ಆದರೆ ಅಭಿವೃದ್ದಿ, ಸವಾಲುಗಳ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಸರ್ಕಾರದ ಇಂದಿನ ನಿರ್ವಾಹಕ ಪಕ್ಷವಾದ ಎಡರಂಗ ಎಂದಿಗೂ ಜನವಂಚನೆ ನಡೆಸದು. ಜನಸಾಮಾನ್ಯರ ಒಳಿತಿಗೆ ಅದು ವಿವಿಧ ಕಾಲಘಟ್ಟದಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಅವುಗಳ ತಪ್ಪಾದ ವ್ಯಾಖ್ಯಾನ ದಿಕ್ಕುತಪ್ಪಿಸುವಂತೆ ಮಾಡುತ್ತಿದೆ. ಆದರೆ ಈಗಿನ ಕಾಲಘಟ್ಟದಲ್ಲಿ ಅದು ಸುಲಭವಾಗದು ಎಂದು ಎಚ್ಚರಿಸಿದರು.
ಸಚಿವರುಗಳಾದ ಇ.ಪಿ. ಜಯರಾಜನ್, ಕಡನ್ನಪ್ಪಳ್ಳಿ ರಾಮಚಂದ್ರನ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ವಿ.ಬಾಲಕೃಷ್ಣನ್, ಮಾಜಿ ಸಂಸದ ವಿ.ಕರುಣಾಕರನ್, ಕೆ.ಇ.ಇಸ್ಮಾಯಿಲ್, ಕಾಸಿಂ ಇರಿಕ್ಕೂರ್,ಕೆ.ಆರ್.ಜಯಾನಂದ ಮೊದಲಾದವರು ಉಪಸ್ಥಿತರಿದ್ದರು. ಚುನಾವಣಾ ಅಭ್ಯರ್ಥಿ ಶಂಕರ ರೈ ಮಾಸ್ತರ್ ಸ್ವಾಗತಿಸಿ, ವಂದಿಸಿದರು.


