ಮುಳ್ಳೇರಿಯ: ಬೆಳ್ಳಿಪ್ಪಾಡಿ ಶಕ್ತಿನಗರ ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ವರ್ಷಂಪ್ರತಿ ನಡೆದು ಬರುವಂತೆ ಭಜನಾ ಕಾರ್ಯಕ್ರಮ, ಆಯುಧ ಪೂಜೆ, ಯಕ್ಷಗಾನ ತಾಳಮದ್ದಳೆ ವೈಭವದಿಂದ ಸಂಪನ್ನಗೊಂಡಿತು.
ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ದೇಲಂಪಾಡಿ ಇದರ ಸದಸ್ಯರಿಂದ ಹಿರಿಯ ಭಾಗವತ ವಿಶ್ವ ವಿನೋದ ಬನಾರಿ ಅವರ ನಿರ್ದೇಶನದಲ್ಲಿ ಶಾಂಭವಿ ವಿಲಾಸ ಯಕ್ಷಗಾನ ತಾಳಮದ್ದಳೆ ನಡೆಯಿತು. ಭಾಗವತರಾಗಿ ಗಾನ ಕೋಗಿಲೆ ಮೋಹನ ಮೆಣಸಿಕಾನ, ಮೃದಂಗ ಹಾಗೂ ಚೆಂಡೆ ವಾದನದಲ್ಲಿ ವಿಷ್ಣು ಶರಣ ಬನಾರಿ ಮತ್ತು ಬಿ.ಎಚ್.ಕೃಷ್ಣ ಪ್ರಸಾದ್ ಬೆಳ್ಳಿಪ್ಪಾಡಿ ಸಹಕಾರ ನೀಡಿದರು.
ಅರ್ಥಗಾರಿಕೆಯಲ್ಲಿ ಪಾತ್ರದಾರಿಗಳಾಗಿ ಶ್ರೀ ದೇವಿ -ಕಟೀಲು ಮೇಳದ ವೇಷದಾರಿ ಮೋಹನ ಬೆಳ್ಳಿಪ್ಪಾಡಿ, ಶುಂಭಾಸುರ - ಎಂ.ರಮಾನಂದ ರೈ ದೇಲಂಪಾಡಿ, ಸುಗ್ರೀವ- ಕಲ್ಲಡ್ಕ ರಾಮಯ್ಯ ರೈ, ಚಂಡಾಸುರ- ಕೃಷ್ಣಪ್ಪ ಗೌಡ ಕುತ್ತಿಮುಂಡ, ಮುಂಡಾಸುರ- ವೀರಪ್ಪ ಸುವರ್ಣ ನಡುಬೈಲು, ದೂಮ್ರಾಕ್ಷ- ರಾಮ ನಾಯಕ್ ಬಸಿರಡ್ಕ, ರಕ್ತ ಬೀಜ -ಬೆಳ್ಳಿಪ್ಪಾಡಿ ಸದಾಶಿವ ರೈ ನಿರ್ವಹಿಸಿದರು.
ಭಜನಾ ಕಾರ್ಯಕ್ರಮವನ್ನು ಬೆಳ್ಳಿಪ್ಪಾಡಿ ಚಂದ್ರಶೇಖರ ಗೌಡ ಅವರು ನಿರೂಪಿಸಿದರು. ಆಯುಧ ಪೂಜೆಯ ಉಸ್ತುವಾರಿಯನ್ನು ಬಿ.ಯಚ್.ಕುಶಾಲಪ್ಪ ಗೌಡ ಮತ್ತು ಬಿ.ಯಚ್.ಧನಂಜಯ ಹಾಗೂ ಅಮಜಿಮೂಲೆ ಉಮೇಶ ಗೌಡ ನಿರ್ವಹಿಸಿದರು. ವಿವಿಧ ಧಾರ್ಮಿಕ ಕಾರ್ಯಕ್ರಮದ ಉಸ್ತುವಾರಿಯನ್ನು ಮಂದಿರ ಸಮಿತಿಯ ಗೌರವಾಧ್ಯಕ್ಷ ಕೋಟಿಗದ್ದೆ ಜನಾರ್ಧನ ನಾಯಕ್ ನಿರ್ವಹಿಸಿದರು. ಆ ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಬೆಳ್ಳಿಪ್ಪಾಡಿ ತಿರುಮಲೇಶ್ವರ ಗೌಡ ಸ್ವಾಗತಿಸಿ, ಬೆಳ್ಳಿಪ್ಪಾಡಿ ತೋಟ ಶಿವರಾಮ ಗೌಡ ವಂದಿಸಿದರು.





