ಮುಳ್ಳೇರಿಯ: ಸೋಮವಾರ ರಾತ್ರಿ ಮುಳ್ಳೇರಿಯ ವ್ಯಾಪ್ತಿ ಪ್ರದೇಶದಲ್ಲಿ ವ್ಯಾಪಕ ಪ್ರಮಾಣದ ಹಠಾತ್ ಸುಂಟರ ಗಾಳಿ ಹಾಗೂ ಮಳೆಗೆ ಭಾರೀ ಹಾನಿ ಉಂಟಾಗಿದೆ.
ಸೋಮವಾರ ರಾತ್ರಿ 7.30ರ ಹೊತ್ತಿಗೆ ಗಾಳಿಯೊಂದಿಗೆ ಭಾರೀ ಮಳೆ ಸುರಿದಿದ್ದು, ಗಾಳಿಯ ರಭಸಕ್ಕೆ ಬೃಹತ್ ಮರಗಳು ಧರಾಶಾಯಿಯಾಗಿ ವಿದ್ಯುತ್ ಕಂಬಗಳು ಉರುಳಿ ಭಾರೀ ನಷ್ಟ ಉಂಟಾಗಿದೆ. ಆಲಂತ್ತಡ್ಕ, 13ನೇ ಮೈಲ್ ಜಂಕ್ಷನ್ ನಲ್ಲಿ ಬೃಹತ್ ಮರಗಳು ಧರಾಶಾಯಿಯಾಯಿತು. ಮೂರು ಮಂದಿ ನಾಗರಿಕರು ಅಲ್ಪ ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಮುಳ್ಳೇರಿಯ ಪೇಟೆಯಲ್ಲಿ ಬೃಹತ್ ಮರಗಳು ಬಿದ್ದು, ಗೂಡಂಗಡಿ ನಾಶವಾಗಿದ್ದು, ವಿದ್ಯುತ್ ಎಚ್ ಟಿ ಲೈನ್ ತುಂಡಾಗಿದೆ. ಜಾಲ್ಸೂರು-ಚೆರ್ಕಳ ಹಾಗೂ ಮುಳ್ಳೇರಿಯ-ಬದಿಯಡ್ಕ ರಸ್ತೆ ಸಂಚಾರ ಮೊಟಕುಗೊಂಡಿತು. ನಾಟೆಕಲ್ಲು-ಮುಳ್ಳೇರಿಯಾ ರಸ್ತೆ ಬೇಂಗತ್ತಡ್ಕದಲ್ಲಿ ಮರಬಿದ್ದ ಕಾರಣ ಮೊಟಕುಗೊಂಡಿದ್ದು, 10.30ರ ವೇಳೆಗೆ ರಸ್ತೆ ಸುಗಮಗೊಳಿಸಲಾಯಿತು.

