ಕುಂಬಳೆ: ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾಗಿ ಭರದಿಂದ ಪ್ರಚಾರ ನಡೆಯುತ್ತಿರುವಾಗಲೇ ಕನ್ನಡಿಗರ ಸಮಸ್ಯೆ ಪರಿಹಾರಕ್ಕಾಗಿ ಪ್ರಯತ್ನಿಸುವುದಾಗಿ ಅಭ್ಯರ್ಥಿಗಳು ಭರವಸೆ ನೀಡಿ ಕನ್ನಡಿಗರ ಮತ ಸೆಳೆಯುವ ಪ್ರಯತ್ನದಲ್ಲಿರುವಾಗಲೇ ಜಿಲ್ಲಾ ಶಿಕ್ಷಣ ಉಪನಿರ್ದೇಶಕರ ಕಚೇರಿ ಮೂಲಕ ಇಬ್ಬರು ಕನ್ನಡ ಅರಿಯದ ಶಿಕ್ಷಕರನ್ನು ಕನ್ನಡ ಶಾಲೆಗಳಲ್ಲಿ ನೇಮಕಗೊಳಿಸಿ ಆದೇಶ ಹೊರಡಿಸಿರುವುದು ಭಾರೀ ಪ್ರತಿಭಟನೆಗೆ ಕಾರಣವಾಗಿದೆ.
ಇದೀಗ ಬೇಕಲ ಫಿಶರೀಶ್ ಹೈಸ್ಕೂಲ್ ಮತ್ತು ಉದುಮ ಹೈಯರ್‍ಸೆಕೆಂಡರಿ ಶಾಲೆಯ ಸಮಾಜ ವಿಜ್ಞಾನ ಕನ್ನಡ ಅಧ್ಯಾಪಕ ಹುದ್ದೆಗೆ ಕನ್ನಡ ಅರಿಯದ ಮಲಯಾಳ ಅಧ್ಯಾಪಕರ ನೇಮಕ ಆದೇಶದ ವಿರುದ್ಧ ವಿದ್ಯಾರ್ಥಿಗಳ ಹೆತ್ತವರು, ಕನ್ನಡ ಭಾಷಾಭಿಮಾನಿಗಳು ಈಗಾಗಲೇ ವಿರೋಧ ವ್ಯಕ್ತಪಡಿಸಿ ದೂರು ನೀಡಲಾಗಿದೆ.
ಕನ್ನಡ ಶಾಲೆಗಳಿಗೆ ಕನ್ನಡ ತಿಳಿಯದ ಶಿಕ್ಷಕರನ್ನು ನೇಮಿಸುತ್ತಿರುವುದರಿಂದ ಭಾಷಾ ಅಲ್ಪಸಂಖ್ಯಾಕರಿಗೆ ಮಾತೃಭಾಷೆಯಲ್ಲಿ ಕಲಿಯುವ ಕನ್ನಡ ವಿದ್ಯಾರ್ಥಿಗಳ ಹಕ್ಕಿಗೆ ಧಕ್ಕೆಯಾಗಲಿದೆ. ಸಾರ್ವಜನಿಕ ಶಿಕ್ಷಣರಂಗವನ್ನು ಉಳಿಸುವುದಕ್ಕಾಗಿ ಸರಕಾರ ಸಾರ್ವಜನಿಕ ಶಿಕ್ಷಣ ಯಜ್ಞ ಆರಂಭಿಸಿದೆ. ಆದರೆ ಇನ್ನೊಂದಡೆ ಸರಕಾರ ಕನ್ನಡ ಭಾಷೆಯನ್ನು ತಿಳಿಯದ ಶಿಕ್ಷಕರನ್ನು ನೇಮಿಸುವ ಮೂಲಕ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳೇ ಹೆಚ್ಚಾಗಿ ಕಲಿಯುತ್ತಿರುವ ಸರಕಾರಿ ಶಾಲೆಗಳ ಕನ್ನಡ ಮಾಧ್ಯಮ ವಿಭಾಗವನ್ನು ಮುಚ್ಚಿಸಿ ಖಾಸಗಿ ಶಾಲೆಗಳಿಗೆ ನೆರವಾಗಲು ಹೊರಟಿದೆ. ನಿಧನವಾಗಿ ಕಾಸರಗೋಡು ಜಿಲ್ಲೆಯ ಕನ್ನಡ ಶಾಲೆಗಳನ್ನು ಮುಚ್ಚಿಸುವ ಹುನ್ನಾರ ನಡೆಯುತ್ತಿದೆ.
ಸಮಸ್ಯೆ ಬಗ್ಗೆ ಶಿಕ್ಷಣ ಇಲಾಖೆ ನಿರ್ಲಕ್ಷ:
ಈ ಹಿಂದೆಯೇ ಮಂಗಲ್ಪಾಡಿ, ಪೈವಳಿಕೆ, ಬೇಕೂರು, ಪೆರಡಾಲ ಹಾಗೂ ಬಂದಡ್ಕ ಮುಂತಾದ ಸಕಾರಿ ಶಾಲೆಗಳ ಕನ್ನಡ ಮಾಧ್ಯಮದಲ್ಲಿ ಕಲಿಸುವುದಕ್ಕಾಗಿ ಕನ್ನಡ ತಿಳಿಯದ ಶಿಕ್ಷಕರನ್ನು ನೇಮಿಸಲಾಗಿತ್ತು. ಇದರ ವಿರುದ್ಧ ಧರಣಿ, ತರಗತಿ ಬಹಿಷ್ಕಾರ, ಉಪವಾಸ ಸತ್ಯಾಗ್ರಹ, ದೂರು ಮನವಿಗಳ ಸಲ್ಲಿಕೆ ನ್ಯಾಯಾಂಗ ಹೋರಾಟಗಳನ್ನು ಕನ್ನಡಿಗ ವಿದ್ಯಾರ್ಥಿಗಳ ಪೆÇೀಷಕರು ಕೈಗೊಂಡಿದ್ದರು.
ಇದರ ಫಲವಾಗಿ ಇಬ್ಬರು ಶಿಕ್ಷಕರನ್ನು ವೇತನ ಸಹಿತ ರಜೆಯಲ್ಲಿ ಕನ್ನಡ ಕಲಿಯಲು ಮೈಸೂರಿನ ಪ್ರಾದೇಶಿಕ ಭಾಷಾ ಅಧ್ಯಾಯನ ಕೇಂದ್ರಕ್ಕೆ ಕಳುಹಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಹಿಂದಿನ ಅನುಭವಗಳ ಆಧಾರದಲ್ಲಿ ಇವರು ಕನ್ನಡ ಕಲಿತು ಕನ್ನಡದಲ್ಲಿ ಪಾಠ ಮಾಡಲು ಸಮರ್ಥರಾಗುವರೆಂಬ ವಿಶ್ವಾಸ ಕನ್ನಡಿಗರಿಗಿಲ್ಲ.
ಕನ್ನಡ ತಿಳಿಯದಿದ್ದರೂ ಕೇರಳ ಲೋಕಸೇವಾ ಆಯೋಗ(ಪಿಎಸ್‍ಸಿ) ಅಕ್ರಮವಾಗಿ ಆಯ್ಕೆಯಾದ ಈ ಅನರ್ಹ ಶಿಕ್ಷಕರಿಗೆ ಕನ್ನಡದಲ್ಲಿ ಮೂರು ಗಂಟೆಗಳ ವಿವರಣಾತ್ಮಕ ಲಿಖಿತ ಪರೀಕ್ಷೆ ನಡೆಸಿ ಅದರಲ್ಲಿ ತೇರ್ಗಡೆಯಾದರೆ ಮಾತ್ರ ಕನ್ನಡ ಮಾಧ್ಯಮ ತರಗತಿಗಳಿಗೆ ಪಾಠ ಮಾಡಲು ಅನುಮತಿ ನೀಡಬೇಕೆಂದೂ ಇಲ್ಲವಾದರೆ ಇವರನ್ನು ಮಲಯಾಳ ಮಾಧ್ಯಮಕ್ಕೆ ಅಥವಾ ತತ್ಸಮಾನ ಹುದ್ದೆಗಳಿಗೆ ವರ್ಗಾಯಿಸಿ ಕನ್ನಡ ವಿದ್ಯಾರ್ಥಿಗಳ ಹಿತ ಕಾಪಾಡಬೇಕೆಂದೂ ಕನ್ನಡಿಗರು ಒತ್ತಾಯಿಸಿದ್ದರು.
ಆದರೆ ಇದಕ್ಕೆ ಕಿವಿಗೊಡದ ಸರ್ಕಾರ ಮತ್ತೆ ಇಬ್ಬರು ಕನ್ನಡ ಬಾರದ ಸಮಾಜ ವಿಜ್ಞಾನ ಅಧ್ಯಾಪಕರ ನೇಮಕಕ್ಕೆ ಆದೇಶ ನೀಡಿರುವುದು. ಕನ್ನಡ ಮಾಧ್ಯಮ ಶಿಕ್ಷಕ ಹುದ್ದೆಯ ವಿವಿಧ ಪಿಎಸ್‍ಸಿಯ ರ್ಯಾಂಕ್ ಪಟ್ಟಿಗಳಲ್ಲಿ ಇಪ್ಪತ್ತಮೂರಕ್ಕೂ ಹೆಚ್ಚು ಕನ್ನಡ ಅರಿಯದವರಿದ್ದು ಇವರೆಲ್ಲರ ನೇಮಕವಾದರೆ ಕೆಲವು ಶಾಲೆಗಳ ಕನ್ನಡ ಮಾಧ್ಯಮ ವಿಭಾಗಗಳೇ ಮುಚ್ಚಬಹುದು. ಕನ್ನಡ ಅರಿತ ಉದ್ಯೋಗಾರ್ಥಿಗಳನ್ನು ಕಡೆಗಣಿಸಿ ಕನ್ನಡ ತಿಳಿಯದವರನ್ನು ನೇಮಿಸಿ ಕನ್ನಡ ವಿದ್ಯಾರ್ಥಿಗಳ ಹಿತವನ್ನು ಕಡೆಗಣಿಸಿ ಕನ್ನಡ ತಿಳಿಯದ ತೆಂಕಣ ಕೇರಳದ ಶಿಕ್ಷಕರನ್ನು ಶಿಕ್ಷಣ ಇಲಾಖೆ ರಕ್ಷಿಸಲು ಹೊರಟಿದೆ.
ಹೊಣೆಗಾರಿಕೆಯಿಂದ ನುಣಿಚಿಕೊಂಡ ಶಿಕ್ಷಣ ಇಲಾಖೆ:
ಅನರ್ಹ ಶಿಕ್ಷಕರನ್ನು ನೇಮಿಸಿದ್ದು ಕೇರಳ ಲೋಕಸೇವಾ ಆಯೋಗವೇ ಹೊರತು ಸರ್ಕಾರವಲ್ಲ ಎಂಬುದು ಜನಪ್ರತಿನಿಗಳ ವಾದ. ಕನ್ನಡ ಭಾಷಾ ತಜ್ಞರ ಸಹಾಯವನ್ನು ಪಡೆದು ಅಧ್ಯಾಪಕರನ್ನು ನೇಮಿಸಲಾಗಿದೆ ಎಂದು ಪಿಎಸ್‍ಸಿ ಸಮಜಾಯಿಷಿ ನೀಡುತ್ತಿದೆ. ಅಂಕಗಳನ್ನು ನೀಡಿದ್ದು ಸಂದರ್ಶಕ ಸಮಿತಿಯಲ್ಲಿದ್ದ ಪಿಎಸ್‍ಸಿ ಮಂಡಳಿಯೇ ಹೊರತು ಇದರಲ್ಲಿ ಭಾಷಾ ತಜ್ಞರ ಪಾಲಿಲ್ಲ ಎಂಬುದು ಇನ್ನೊಂದು ವಾದವಾಗಿದೆ. ಹೀಗೆ ಒಬ್ಬರನ್ನೊಬ್ಬರು ಬೆರಳುಮಾಡಿ ತೋರಿಸುತ್ತಿದ್ದಾರೆಯೇ ಹೊರತು ಅಮಾಯಕ ವಿದ್ಯಾರ್ಥಿಗಳಿಗಾದ ಅನ್ಯಾಯಕ್ಕೆ ಯಾರದೂ ಸಹಾನುಭೂತಿಯೂ ಇಲ್ಲ.
ಲೋಕಸೇವಾ ಆಯೋಗವೇ ಶಂಕ್ಯಾಸ್ಪದ:
ಈ ಮಧ್ಯೆ ಕಳೆದ ಕೆಲವು ವರ್ಷಗಳಿಂದ ರಾಜ್ಯ ಲೋಕಸೇವಾ ಆಯೋಗದ ನಡೆಗಳು ಶಂಕೆಗೆ ಕಾರಣವಾಗುತ್ತಿದೆ. ಪ್ರಸ್ತುತ ಭಾರೀ ಸದ್ದು ಮಾಡಿರುವ ಸರ್ಕಾರದ ಒಳನುಸುಳುವಿಕೆ, ಪಕ್ಷದ ಕಡೆಯಿಂದ ಅಭ್ಯರ್ಥಿಗಳ ಆಯ್ಕೆ ಮೊದಲಾದ ಕೂಗಿನ ಮಧ್ಯೆ ಕನ್ನಡ ಅಧ್ಯಾಪಕರ ನೇಮಕಾತಿಯ ಹಿಂದೆಯೂ ಕರಾಮತ್ತು ನಡೆದಿರಬೇಕೆಂದು ಸಂಶಯಿಸಲಾಗುತ್ತಿದೆ.
ಸರ್ಕಾರ ಕನ್ನಡಿಗರ ಬಗ್ಗೆ ನಿರ್ಲಕ್ಷ್ಯದ ಧೋರಣೆಯನ್ನು ಮುಂದುವರಿಸಿದರೆ ಮಂಜೇಶ್ವರದ ಜಾಗೃತ ಮತದಾರರು ಪಾಠ ಕಲಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.


