HEALTH TIPS

ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ನೈಜ ಬಣ್ಣ ಬಯಲು-ಕನ್ನಡಿಗರೊಂದಿಗೆ ಅಭ್ಯರ್ಥಿಗಳು ಕಾರ್ಯಕ್ರಮಕ್ಕೆ ಬಾರದ ಉಮೇದ್ವಾರರು-ಕನ್ನಡ ಕಾಳಜಿಯ ಅಸಲಿ ಬೆಳಕಿಗೆ


      ಕುಂಬಳೆ: ಕನ್ನಡ ಭಾಷಾ ಅಲ್ಪಸಂಖ್ಯಾತರು ಬಹುಸಂಖ್ಯೆಯಲ್ಲಿರುವ ಮಂಜೇಶ್ವರ ವಿಧಾನ ಸಭಾ ಪ್ರದೇಶದಲ್ಲಿ ಅ.21 ರಂದು ನಡೆಯಲಿರುವ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ರಾಜಕೀಯ ಪಕ್ಷಗಳು ಕನ್ನಡಿಗರನ್ನೇ ಅಭ್ಯರ್ಥಿಗಳಾಗಿ ಕಣಕ್ಕಿಳಿಸಿದ್ದು, ಇದು ಕನ್ನಡ ಹೋರಾಟದ ಫಲವಾಗಿದೆ. ಕನ್ನಡಿಗರ ಮತಗಳೇ ನಿರ್ಣಾಯಕವಾಗಿರುವ ಮಂಜೇಶ್ವರ ಉಪಚುನಾವಣೆಯಲ್ಲಿ ಭಾಷಾ ಅಲ್ಪಸಂಖ್ಯಾತರ ಸಮಸ್ಯೆಗಳ ಪರಿಹಾರೋಪಾಯಗಳ ಕುರಿತು ಅಭ್ಯರ್ಥಿಗಳ ಮನದ ಇಂಗಿತವನ್ನು ತಿಳಿಯುವ ಸಲುವಾಗಿ ಎಲ್ಲಾ ಅಭ್ಯರ್ಥಿಗಳ ಸಮ್ಮುಖದಲ್ಲಿ ಕನ್ನಡಿಗರೊಂದಿಗೆ ಅಭ್ಯರ್ಥಿಗಳು ಎಂಬ ಕಾರ್ಯಕ್ರಮವನ್ನು ಶನಿವಾರ ಕುಂಬಳೆಯ ಮಾಧವ ಪೈ ಸಭಾಂಗಣದಲ್ಲಿ ಕನ್ನಡ ಹೋರಾಟ ಸಮಿತಿ ಆಯೋಜಿಸಿತ್ತು. ಈ ಸಭೆಗೆ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಗೈರು ಹಾಜರಾಗುವ ಮೂಲಕ ತಮ್ಮ ಕನ್ನಡ ಭಾಷಾ ಪ್ರೇಮದ ನಿಲುವನ್ನು ಜಗಜ್ಜಾಹೀರುಗೊಳಿಸಿದ್ದು, ಜನರ ಆಕ್ರೋಶಕ್ಕೆ ಕಾರಣವಾಯಿತು.
     ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳುಕ್ಕುರಾಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಎನ್ ಡಿ ಎ ಅಭ್ಯರ್ಥಿ ಕುಂಟಾರು ರವೀಶ ತಂತ್ರಿ ಅವರ ಅನುಪಸ್ಥಿತಿಯಲ್ಲಿ ಅವರ ಪ್ರತಿನಿಧಿಯಾಗಿ ನ್ಯಾಯವಾದಿ ವಿ. ಬಾಲಕೃಷ್ಣ ಶೆಟ್ಟಿ ಮಾತ್ರ ಪಾಲ್ಗೊಂಡರು. ಜೊತೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಜೋನ್ ಕ್ರಾಸ್ತಾ ಉಪಸ್ಥಿತರಿದ್ದರು. ಮಿಕ್ಕುಳಿದಂತೆ ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಎಸ್.ವಿ.ಭಟ್, ನಿವೃತ್ತ ಮುಖ್ಯೋಪಾದ್ಯಾಯ, ಹಿರಿಯ ಕನ್ನಡ ಹೋರಾಟಗಾರ ನಾರಾಯಣ ಗಟ್ಟಿ ಕುಂಬಳೆ ಉಪಸ್ಥಿತರಿದ್ದರು.
    ಎನ್ ಡಿ ಎ ಅಭ್ಯರ್ಥಿಯ ಪರವಾಗಿ ಆಗಮಿಸಿದ್ದ ನ್ಯಾಯವಾದಿ ವಿ.ಬಾಲಕೃಷ್ಣ ಶೆಟ್ಟಿ ಅವರು ಮಾತನಾಡಿ, ಮಂಜೇಶ್ವರ ವಿಧಾನ ಸಭಾ ಕ್ಷೇತ್ರಕ್ಕೆ ಈವರೆಗೆ ರಾಜಕೀಯ ಪಕ್ಷಗಳಿಂದ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಕನ್ನಡಿಗರ ಬಗ್ಗೆ ಯಾವುದೇ ಕಕ್ಕುಲತೆ ಇರಲಿಲ್ಲ. ಕನ್ನಡಿಗರ ಮತ ಪಡೆದು ಗೆದ್ದವರು ಈವರೆಗೆ ಆತ್ಮಾರ್ಥವಾಗಿ ಸ್ಪಂದಿಸಿಲ್ಲ. ಈ ಹಿಂದೆ ರಾಜ್ಯ ಲೋಕಸೇವಾ ಆಯೋಗವು ಕನ್ನಡಿಗ ಪರೀಕ್ಷಾರ್ಥಿಗಳಿಗೆ ಮಲೆಯಾಳ ಪ್ರಶ್ನೆ ಪತ್ರಿಕೆಗಳನ್ನು ನೀಡಿ ಸಂಕಷ್ಟಕ್ಕೆ ತಳ್ಳಿದಾಗ ಬಿಜೆಪಿ ಪ್ರಬಲ ಹೋರಾಟದ ಮೂಲಕ ಆಯೋಗಕ್ಕೆ ತಕ್ಕ ಪಾಠ ಕಲಿಸಿದೆ. ಈ ಹಿನ್ನೆಲೆಯಲ್ಲಿ ಅಂದೂ, ಇಂದು, ಮುಂದೂ ಪಕ್ಷವು ಗಡಿನಾಡಿನ ಕನ್ನಡಿಗರ ಜೊತೆ ಇರಲಿದೆ ಎಂದು ತಿಳಿಸಿದರು. ಕೇಂದ್ರ ಸರ್ಕಾರದ ರೈಲ್ವೇ ಇಲಾಖೆ, ಅಂಚೆ ಇಲಾಖೆ ಹಾಗೂ ಇತರ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿ ಮತ್ತು ಸೌಲಭ್ಯಗಳ ನಿಟ್ಟಿನಲ್ಲಿ ಗಡಿನಾಡ ಕನ್ನಡಿಗರು ಎದುರಿಸುವ ಸಮಸ್ಯೆಗೆ ಉತ್ತರ ಕಂಡುಕೊಳ್ಳುವಲ್ಲಿ ಹಂತಹಂತದ ಕಾರ್ಯಯೋಜನೆಯನ್ನು ಈಗಾಗಲೇ ಕೈಗೊಳ್ಳಲಾಗುತ್ತಿದೆ ಎಂದರು. ಪಕ್ಷವು ಕನ್ನಡ ಮತದಾರ ಪಟ್ಟಿಯನ್ನೇ ಬಳಸುತ್ತಿದ್ದು, ಈ ನಿಟ್ಟಿನಲ್ಲಿ ಕನ್ನಡಿಗರ ಎಲ್ಲಾ ಆಶೋತ್ತರಗಳಿಗೆ ಪಕ್ಷ ಬದ್ದವಾಗಿದೆ ಎಂದರು.
     ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಜೋನ್ ಕ್ರಾಸ್ತಾ ಅವರು ಮಾತನಾಡಿ, ಉಪ ಚುನಾವಣೆಯಲ್ಲಿ ತಾನು ಸೋತರೂ, ಗೆದ್ದರೂ ಕನ್ನಡಿಗರ ಪರವಾಗಿ ಸದಾ ಮುನ್ನೆಲೆಯಲ್ಲಿರುವೆ ಎಂದು ತಿಳಿಸಿದರು.
   ಅಧ್ಯಕ್ಷತೆ ವಹಿಸಿ ಮಾತನಾಡಿದ ನ್ಯಾಯವಾದಿ ಮುರಳೀಧರ ಬಳ್ಳುಕ್ಕುರಾಯ ಅವರು, ಕೇರಳ ರಾಜಕೀಯ ಚರಿತ್ರೆಯಲ್ಲಿ ಅವರೋಧ ಆಯ್ಕೆಯ ಮೂಲಕ ಎರಡು ಬಾರಿ ಶಾಸಕರನ್ನು ಆಯ್ಕೆಗೊಳಿಸಿದ್ದ ಇತಿಹಾಸವಿರುವ ಕಾಸರಗೋಡಿನಲ್ಲಿ ಭಾಷಾ ಅಲ್ಪಸಂಖ್ಯಾತ ಕನ್ನಡಿಗರು ಓಟ್ ಬ್ಯಾಂಕ್ ಆಗಿ ಇಂದು ಪರಿವರ್ತಿತರಾಗಬೇಕಿದೆ. ಈ ಮೂಲಕ ಕನ್ನಡಿಗರಲ್ಲದ ಅಭ್ಯರ್ಥಿಗಳನ್ನು ಚುನಾವಣೆಗೆ ಉಮೇದ್ವಾರಿಕೆಗೆ ಬಳಸದ ಸ್ಥಿತಿ ನಿರ್ಮಾಣವಾಗಬೇಕು. ಕನ್ನಡ ತಾಯಿ ಹೆತ್ತ ಅಭ್ಯರ್ಥಿಗಳೇ ವಿವಿಧ ರಾಜಕೀಯ ಪಕ್ಷಗಳಿಂದ ಸ್ಪರ್ಧಿಸಬೇಕು. ಹಾಗಿದ್ದರಷ್ಟೆ ಇಲ್ಲಿಯ ಕನ್ನಡದ ಅಸ್ಮಿತೆಯ ಅರಿವಲ್ಲಿ ಆಗುವ ಅನ್ಯಾಯಕ್ಕಿದಿರಾಗಿ ದುಡಿಯಲು ಸಾಧ್ಯ ಎಂದರು.
     ಆಕ್ರೋಶ:
   ಕನ್ನಡ ಹೋರಾಟ ಸಮಿತಿ ಅಪೂರ್ವವಾಗಿ ಸಂಘಟಿಸಿದ ಕನ್ನಡಿಗರೊಂದಿಗೆ ಅಭ್ಯರ್ಥಿಗಳು ಕಾರ್ಯಕ್ರಮಕ್ಕೆ ಯಡಿಎಫ್ ಅಭ್ಯರ್ಥಿ ಎಂ.ಸಿ.ಖಮರುದ್ದೀನ್ ಮತ್ತು ಎಲ್ ಡಿ ಎಫ್ ಅಭ್ಯರ್ಥಿ ಶಂಕರ ರೈ ಅವರು ಗೈರು ಹಾಜರಾದುದು ಆಕ್ರೋಶಕ್ಕೆ ಕಾರಣವಾಯಿತು. ಕನ್ನಡ ಭಾಷೆ, ಸಂಸ್ಕøತಿ ಉಳಿವಿನ ಬಗ್ಗೆ ವೇದಿಕೆಗಳಲ್ಲಿ ಭರವಸೆ ನೀಡುವ ಪಕ್ಷಗಳು ತಮ್ಮ ನೈಜತೆಯನ್ನು ಈಮೂಲಕ ತೋರ್ಪಡಿಸಿದರೆಂಬ ಮಾತುಗಳು ಸಭೆಗೆ ಆಗಮಿಸಿದ ಬಹುತೇಕ ಮಂದಿ ವ್ಯಕ್ತಪಡಿಸಿದರು.
    ಎಲ್ ಡಿ ಎಫ್ ಪರವಾಗಿ ಚುನಾವಣಾ ಪ್ರಚಾರದ ಭಾಗವಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶನಿವಾರ ಮಂಜೇಶ್ವರ ಮಂಡಲ ವ್ಯಾಪ್ತಿಯ ವಿವಿಧೆಡೆ ಪರ್ಯಟನೆ ನಡೆಸಿರುವುದು ಮತ್ತು ಯುಡಿಎಫ್ ಪರ ಪ್ರಚಾರಕ್ಕೆ ಕಾಂಗ್ರೆಸ್ಸ್ ಹಿರಿಯ ನೇತಾರ ಕೆ.ಸಿ.ವೇಣುಗೋಪಾಲ್ ಅವರೂ ಶನಿವಾರ ಮಂಡಲಕ್ಕೆ ಆಗಮಿಸಿರುವುದರಿಂದ ಅಭ್ಯರ್ಥಿಗಳು ಸಭೆಗೆ ಬಂದಿಲ್ಲ ಎಂಬ ಸಬೂಬುಗಳು ಕೇಳಿಬಂದವು. ಆದರೆ ಅಭ್ಯರ್ಥಿಗಳ ಅನುಪಸ್ಥಿತಿಯಲ್ಲಿ ಅವರ ಪರವಾಗಿ ಬೇರೊಬ್ಬರನ್ನು ಕಳಿಸುವ ಉದಾರತೆಯನ್ನು ತೋರದಿರುವುದು ಕೆಚ್ಚೆದೆಯ ಕನ್ನಡಿಗರ ರೋಶಕ್ಕೆ ಕಾರಣವಾಯಿತು.
    ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ. ಸ್ವಾಗತಿಸಿ, ಸಭೆಯ ಔಚಿತ್ಯದ ಕುರಿತು ಮಾಹಿತಿ ನೀಡಿದರು. ಕಸಾಪ ಗಡಿನಾಡ ಘಟಕಾಧ್ಯಕ್ಷ ಎಸ್ ವಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ ಮಾಸ್ತರ್ ಕೂಡ್ಲು ವಂದಿಸಿದರು.
    ಸಭೆಯಲ್ಲಿ ಕಸಾಪ ಗೌರವ ಕಾರ್ಯದರ್ಶಿ ಎಸ್.ನವೀನಚಂದ್ರ ಮಾನ್ಯ, ಸದಸ್ಯ ಸುಂದರ ಬಾರಡ್ಕ, ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ವಿ.ಬಿ.ಕುಳಮರ್ವ, ನಿವೃತ್ತ ಪ್ರಾಧ್ಯಾಪಕಿ ಡಾ.ಯು.ಮಹೇಶ್ವರಿ, ಪ್ರದೀಪ್ ಕುಮಾರ್ ಶೆಟ್ಟಿ ಬೇಳ, ವೀರೇಶ್ವರ ಕಲ್ಮರ್ಕರ್, ಸೌಮ್ಯಾಪ್ರಸಾದ್ ಕಿಳಿಂಗಾರು, ಹೊಸದುರ್ಗ ತಾಲೂಕು ವ್ಯಾಪ್ತಿಯ ಬಟ್ಟತ್ತೂರು ಪ್ರದೇಶದ ಕನ್ನಡ ಪ್ರಮುಖರಾದ ರಂಗನಾಥ ಮೈಲಾಟಿ, ರಾಮಚಂದ್ರ ಪಾಲೆಕ್ಕಿ, ಪ್ರಕಾಶ ಬಂಗಾಡು, ಶಂಕರ, ಬಿ. ವಾಸುದೇವ, ಎರೋಲ್ ಮಂಜುನಾಥ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಜಿಲ್ಲಾಧ್ಯಕ್ಷ ರವೀಂದ್ರನಾಥ ಕೆ.ಆರ್., ತಾರಾನಾಥ ಮಧೂರು, ಶ್ರೀಕಾಂತ್ ಕಾಸರಗೋಡು ಮೊದಲಾದವರು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries