ಪೆರ್ಲ: ದೇವರ ಸ್ವಂತ ನಾಡು ಎಂದೇ ಕರೆಯಲಾಗುವ ಕೇರಳ ರಾಜ್ಯವನ್ನು ಕಮ್ಯೂನಿಸ್ಟರು ಹಾಳುಗೆಡವುತ್ತಿದ್ದಾರೆ. ಕರ್ನಾಟಕದ ತಲಪಾಡಿಯಿಂದ ಕೇರಳ ಗಡಿ ದಾಟಿದಾಗಲೇ ಕೇರಳವು ಅಭಿವೃದ್ಧಿಯಲ್ಲಿ ಎಷ್ಟು ಹಿಂದಿದೆ ಎಂಬುದನ್ನು ತಿಳಿಯಬಹುದು ಎಂದು ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಮಂಜೇಶ್ವರ ವಿಧಾನ ಸಭೆ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಎಂ.ಸಿ.ಕಮರುದ್ದೀನ್ ಅವರ ಚುನಾವಣಾ ಪ್ರಚಾರದ ಅಂಗವಾಗಿ ಶುಕ್ರವಾರ ಸಂಜೆ ಪೆರ್ಲದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಪಶ್ಚಿಮ ಬಂಗಾಳ, ತ್ರಿಪುರಾಗಳಲ್ಲಿ ತನ್ನ ನೆಲೆ ಕಳೆದುಕೊಂಡ ಸಿಪಿಎಂ ದೇಶದಲ್ಲಿ ನಾಮಾವಶೇಷವಾಗುತ್ತಿದೆ.ಕಳೆದ ಲೋಕಸಭೆ ಚುನಾವಣೆಯಲ್ಲಿ ಹಲವು ಸ್ಥಾನಗಳನ್ನು ಕಳೆದುಕೊಂಡ ಕಮ್ಯೂಸಿಸ್ಟ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಕೇರಳದಲ್ಲಿಯೂ ಇದೇ ಸ್ಥಿತಿ ಬರಲಿದೆ. ಕೇಂದ್ರ ಸರಕಾರದ ಹೊಸ ನೀತಿ ದೇಶದ ಆರ್ಥಿಕ ಸ್ಥಿತಿಯನ್ನು ಬುಡಮೇಲು ಗೊಳಿಸಿದೆ.ಐದು ವರ್ಷಗಳಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಹೇಳಲಾಗಿದ್ದರೂ ಕೃಷಿ ಬೆಳವಣಿಗೆ, ಉತ್ಪನ್ನಗಳ ಬೆಲೆ, ಕೃಷಿಕರ ಆದಾಯ ಮತ್ತಷ್ಟು ಕುಂಠಿತವಾಗುತ್ತಿದೆ.ಕೃಷಿಕರು ಹಲವು ಸಮಸ್ಯೆಗಳಲ್ಲಿ ಸಿಲುಕಿದ್ದಾರೆ.ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಿಸಬೇಕಾಗಿದೆ. ಪ್ರಸ್ತುತ ಜಿಡಿಪಿ ಮೌಲ್ಯವೂ ಶೇ.5ಕ್ಕೆ ತಲಪಿದೆ.5ಲಕ್ಷ ಕೋಟಿ ಡಾಲರ್ ಆರ್ಥಿಕ ಬೆಳವಣಿಗೆ ಸಾಧಿಸುತ್ತೇವೆ.10ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಆಡಳಿತಕ್ಕೇರಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ಭರವಸೆಗಳೆಲ್ಲವೂ ಹುಸಿಯಾಗಿದೆ.ಯುವ ಜನರು ಕೆಲಸವಿಲ್ಲದೆ ಅಲೆದಾಡುವ ಪರಿಸ್ಥಿತಿ ಬಂದಿದೆ.ಜಿಡಿಪಿ ಮೌಲ್ಯ ಶೇ.10 ತಲುಪಿದರಷ್ಟೇ ಆರ್ಥಿಕ ಬೆಳವಣಿಗೆ ಸಾಧ್ಯವಾಗಿದ್ದು ಈ ಸರಕಾರದಿಂದ ಇದು ಅಸಾಧ್ಯ.ದೇಶದ ಹಲವೆಡೆ ಪ್ರವಾಹದಿಂದ ಜನರು ತತ್ತರಿಸಿದರೂ ಕೇಂದ್ರ ಸರಕಾರ ಸ್ಪಂದಿಸಿಲ್ಲ.
ಸಾವರ್ಕರ್ ಅವರಿಗೆ ಭಾರತ ರತ್ನ ನೀಡಲು ಬಿಜೆಪಿ ಆಗ್ರಹಿಸುತ್ತಿದೆ. ಗಾಂಧೀಜಿ ಅವರ ಹಂತಕರನ್ನು ವೀರ ಪುರುಷರನ್ನಾಗಿ ಬಿಂಬಿಸುತ್ತಿದೆ.ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವ ಬದಲು ಗಾಂಧೀಜಿಯವರ ಹಂತಕರಿಗೆ ನೀಡುವುದು ಒಳ್ಳೆಯದು ಎಂದು ಲೇವಡಿಗೈದ ಅವರು ಬಿಜೆಪಿಜಾತಿ ಮತದ ಹೆಸರಿನಲ್ಲಿ ಜನರಲ್ಲಿ ಭಿನ್ನಮತ ಮೂಡಿಸಿ ಮತ ಸೆಳೆಯಲು ಪ್ರಯತ್ನಿಸುತ್ತಿದೆ.ಇದೇ ಕಾರಣದಿಂದ ಕಳೆದ ಲೋಕ ಸಭೆ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದಿದೆ.ಕೇರಳದ ಮತದಾರರು ಇದನ್ನು ತಿಳಿಯಲು ಸಮರ್ಥರಾಗಿದ್ದಾರೆ.ಕೇರಳದಲ್ಲಿ ಜಾತಿ ಮತ ಸಮನ್ವಯತೆ ನೆಲೆ ನಿಲ್ಲಲು ಬಿಜೆಪಿಯನ್ನು ಸೋಲಿಸಬೇಕಾಗಿದೆ ಎಂದರು.
ಯುಡಿಎಫ್ ಎಣ್ಮಕಜೆ ಪಂಚಾಯಿತಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ ಅಧ್ಯಕ್ಷತೆ ವಹಿಸಿದ್ದರು.ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಮುಸ್ಲಿಂ ಲೀಗ್ ರಾಷ್ಟ್ರೀಯ ಕಾರ್ಯದರ್ಶಿ ಪಿ.ಕೆ.ಕುಂಞÂ್ಞಲಿಕುಟ್ಟಿ, ಶಾಸಕರಾದ ಎಂ.ಸಂಶುದ್ದೀನ್, ಮಝಳಂಕುಯಿ ಅಲಿ, ಸನ್ನಿ ಜೋಸೆಫ್, ಅಬ್ದುಲ್ ರಹಿಮಾನ್ ಕಲ್ಲಾಯಿ, ಕೆ.ಪಿ.ಎ.ಮಜೀದ್, ಎಂ.ಕೆ.ಮುನೀರ್, ಅಭ್ಯರ್ಥಿ ಎಂ.ಸಿ.ಕಮರುದ್ದೀನ್, ಸಿ.ಟಿ.ಅಹಮ್ಮದಾಲಿ, ಕರ್ನಾಟಕ ಮಾಜಿ ಸಚಿವ ರಮಾನಾಥ ರೈ, ಯು.ಟಿ.ಖಾದರ್, ಶಕುಂತಳಾ ಶೆಟ್ಟಿ, ಕರ್ನಾಟಕ ಯುವ ಕಾಂಗ್ರೆಸ್ ನೇತಾರ ಮಿಥುನ್ ರೈ, ವಿನಯಕುಮಾರ್ ಸೊರಕೆ, ಐವನ್ ಡಿಸೋಜಾ, ಪ್ರಮೋದ್ ಮಧ್ವರಾಜ್, ಕಾಸರಗೋಡು ಜಿಲ್ಲಾ ಕಾಂಗ್ರೆಸ್ಸ್ ಅಧ್ಯಕ್ಷ ಹಕೀಂ ಕುನ್ನಿಲ್, ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್., ಕಣ್ಣೂರು ಮಾಜಿ ಜಿಲ್ಲಾ ಕಾಂಗ್ರೆಸ್ಸ್ ಮಾಜಿ ಅಧ್ಯಕ್ಷ ಕೆ.ಸುರೇಂದ್ರನ್, ಸಾಜಿದ್ ಪೊವ್ವಲ್, ಬಾಲಕೃಷ್ಣನ್ ಪೆರಿಯ, ಗೋವಿಂದನ್ ನಾಯರ್, ಯುಡಿಎಫ್ ಮುಖಂಡರು, ಎಣ್ಮಕಜೆ ಪಂಚಾಯಿತಿ ಜನ ಪ್ರತಿನಿಧಿಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.


