ನವದೆಹಲಿ: ಮುಂಚಿತವಾಗಿ ಯಾವ ಸೂಚನೆಯನ್ನೂ ನೀಡದೆ ಪಾಕಿಸ್ತಾನವು ಭಾರತದೊಂದಿಗಿನ ಪತ್ರಗಳು ಮತ್ತು ಮೇಲ್ ಸಂದೇಶಗಳನ್ನು ಏಕಪಕ್ಷೀಯವಾಗಿ ನಿಲ್ಲಿಸಿರುವುದನ್ನು ಕೇಂದ್ರ ಸಂವಹನ ಸಚಿವ ರವಿಶಂಕರ್ ಪ್ರಸಾದ್ ಖಂಡಿಸಿದ್ದಾರೆ.
"ಪ್ರತಿ ದೇಶವು ವಿಶ್ವ ಅಂಚೆ ಒಕ್ಕೂಟದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ ಪಾಕಿಸ್ತಾನ ಮಾತ್ರ ಇದಕ್ಕೆ ವಿರುದ್ಧವಾಗಿದೆ.ಪಾಕಿಸ್ತಾನವು ಕಳೆದೆರಡು ತಿಂಗಳಿನಿಂದ ಭಾರತದೊಂದಿಗಿನ ಅಂಚೆ ಸೇವೆಗಳನ್ನು ಸ್ಥಗಿತಗೊಳಿಸಿದೆ ನಮಗೆ ಯಾವುದೇ ಪೂರ್ವ ಮಾಹಿತಿ ಅಥವಾ ಸೂಚನೆ ನೀಡದೆ ಪಾಕಿಸ್ತಾನವು ಈ ಕ್ರಮಕ್ಕೆ ಮುಂದಾಗಿದೆ" ಸಚಿವರು ಹೇಳಿದ್ದಾರೆ."ಇದು ನೇರವಾಗಿ ವಿಶ್ವಸಂಸ್ಥೆಯ ಮಾನದಂಡಗಳಿಗೆ ವಿರುದ್ಧವಾಗಿದೆ" ಎಂದು ರವಿಶಂಕರ್ ಪ್ರಸಾದ್ ವ್ಯಾಖ್ಯಾನಿಸಿದ್ದಾರೆ.
ಪಾಕಿಸ್ತಾನವು ಕಳೆದ ಒಂದೂವರೆ ಎರಡು ತಿಂಗಳಿನಿಂದ ಭಾರತದೊಡನೆ ಪತ್ರವ್ಯವಹಾರ ನಡೆಸಿಲ್ಲ, ಇದು ಭಾರತೀಯ ಅಂಚೆ ಇಲಾಖೆಗೆ ಸಹ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಜರುಗಿಸಲು ಪ್ರಚೋದನೆ ನೀಡಿದೆ.


