HEALTH TIPS

ಕಾಸರಗೋಡಿನ ನೆಂಟ-ವಿಶ್ವ ವಿಖ್ಯಾತ ಸ್ಯಾಕ್ಸೋಪೋನ್ ವಾದಕ ಕದ್ರಿ ಗೋಪಾಲನಾಥ್ ಇನ್ನಿಲ್ಲ

         
     ಮಂಗಳೂರು: ವಿಶ್ವವಿಖ್ಯಾತ ಸ್ಯಾಕ್ಸೋಪೋನ್ ವಾದಕ ಕಲೈಮಾಮಣಿ ಕದ್ರಿ ಗೋಪಾಲನಾಥ್ (70) ವಯೋಸಹಜ ಅನಾರೋಗ್ಯದಿಂದ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
      1949ರ ಡಿಸೆಂಬರ್ 11ರಂದು ಜನಿಸಿದ ಗೋಪಾಲನಾಥ್ ಅವರು ಸ್ಯಾಕ್ಸೋಫೋನ್ ವಾದನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಳವಡಿಕೆಯಿಂದ ಅವರು ವಿಶ್ವಪ್ರಸಿದ್ಧಿ ಪಡೆದಿದ್ದರು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗೋಪಾಲನಾಥ್ ಅವರು ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪತ್ನಿ  ಸರೋಜಿನಿ, ಪುತ್ರರಾದ ಗುರುಪ್ರಸಾದ್(ಕುವೈಟ್ ಉದ್ಯೋಗಿ), ಮಣಿಕಾಂತ್ ಕದ್ರಿ (ಸಂಗೀತ ನಿರ್ದೇಶಕ), ಅಂಬಿಕಾ ಕದ್ರಿ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮಂಗಳೂರು ಪದವಿನಂಗಡಿ ಮನೆಯಲ್ಲಿ ಇಂದು ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
    ಕಾಸರಗೋಡಿನ ನೆಂಟ:
   ಗೋಪಾಲನಾಥ್ ಅವರು ಕಾಸರಗೋಡು ಮುಂಡಿತ್ತಡ್ಕದಿಂದ ವಿವಾಹವಾಗಿ ಗಡಿನಾಡಿನ ನೆಂಟ ಎನಿಸಿ ನಿಕಟ ಸಂಬಂಧ ಹೊಂದಿದ್ದರು. ಮುಂಡಿತ್ತಡ್ಕ ಜನಾರ್ಧನ(ಮುಂಡಿತ್ತಡ್ಕ ಅನುದಾನಿತ ಶಾಲಾ ಪ್ರಬಂಧಕರು)ಅವರ ಸಹೋದರಿ ಸರೋಜಿನಿ ಅವರನ್ನು ವರಿಸಿ ಕುಟುಂಬಸ್ಥರಾಗಿದ್ದರು. 
       ಬಾಲ್ಯದಿಂದಲೇ ತಂದೆಯವರಿಂದ ಪಾಠವನ್ನು ಕಲಿತ ಕದ್ರಿ ಗೋಪಾಲನಾಥರು ನಂತರ ಕಲಾನಿಕೇತನದ ಎನ್. ಗೋಪಾಲಕೃಷ್ಣ ಅಯ್ಯರ್ ಅವರಿಂದ ಸ್ಯಾಕ್ಸೋಫೋನ್ ವಾದ್ಯದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ನುಡಿಸುವುದನ್ನು ಕಲಿತರು.
    ಸ್ಯಾಕ್ಸೊಫೋನ್ ವಾದಕರಾದ ಗೋಪಾಲನಾಥ್‍ರವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪಾಣಿ ಮಂಗಳೂರಿನಲ್ಲಿ. ತಂದೆ ತನಿಯಪ್ಪ ನಾಗಸ್ವರ ವಿದ್ವಾಂಸರು.  ಆಕಾಶವಾಣಿ ಎ ಟಾಪ್ ಶ್ರೇಣಿಯ ಕಲಾವಿದರಾಗಿದ್ದರು.ವಿದೇಶಿ ವಾದ್ಯವನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡು , ಅದಕ್ಕೆ ಭಾರತೀಯ ಸಂಗೀತವನ್ನು ಕರಗತ ಮಾಡಿಸಿದವರಲ್ಲಿ ಕದ್ರಿ ಗೋಪಾಲನಾಥರು ಪ್ರಮುಖರು. ಬಾಲ್ಯದಿಂದಲೂ ಸಂಗೀತದಲ್ಲಿ ಒಲವು ಬೆಳೆಸಿಕೊಂಡ ಅವರಿಗೆ ತಂದೆಯೇ ಗುರುವಾಗಿದ್ದರು.
     ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ತಮಿಳುನಾಡು ಸರಕಾರದ ಕಲೈಮಾಮಣಿ, ಕರ್ನಾಟಕ ಕಲಾಶ್ರೀ, ಗಾನಕಲಾ ಭೂಷಣ, ನಾದ ಗಂಧರ್ವ, ನಾದೋಪಾಸನ ಬ್ರಹ್ಮ ಸುನಾದ, ನಾದಕಲಾ ರತ್ನ, ನಾದಕಲಾನಿಧಿ, ಸಂಗೀತ ವಿದ್ಯಾರತ್ನ, ಸಂಗೀತ ರತ್ನ, ಶೃಂಗೇರಿ,  ಮಂತ್ರಾಲಯ, ಅಹೋಬಿಲ ಮುಂತಾದ ಪೀಠಗಳಿಂದ ಸನ್ಮಾನ, ಕಂಚಿ ಕಾಮಕೋಠಿ ಆಸ್ಥಾನ ವಿದ್ವಾನ್, ಬೆಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಕದ್ರಿ ಗೋಪಾಲನಾಥರನ್ನು ಅರಸಿಬಂದಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries