ಕಾಸರಗೋಡು: ಉದುಮ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸಮಾಜ ವಿಜ್ಞಾನ ಪಾಠ ಮಾಡಲು ಪಿಎಸ್‍ಸಿ ನೇಮಕ ಗೊಳಿಸಿದ್ದ ಕನ್ನಡ ಅರಿಯದ ದೃಷ್ಟಿಹೀನ ಅಧ್ಯಾಪಕ ಕೆ.ಮಣಿಕಂಠನ್ ಶುಕ್ರವಾರ ಶಾಲೆಗೆ ಹಾಜರಾಗಿದ್ದು, ವಿದ್ಯಾರ್ಥಿಗಳು, ಪೆÇೀಷಕರು, ಕನ್ನಡ ವಿದ್ಯಾರ್ಥಿ ಸಂರಕ್ಷಣ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಪ್ರತಿಭಟನೆ ನಡೆಸಿದರು. ಕನ್ನಡ ತಿಳಿಯದ ಅಧ್ಯಾಪಕ ತರಗತಿಗೆ ಬಂದಾಗ ವಿದ್ಯಾರ್ಥಿಗಳು ಸತ್ಯಾಗ್ರಹ ಹೂಡಿದರು.
ಪ್ರತಿಭಟನೆಯಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು, ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಹೆತ್ತವರು, ಕನ್ನಡ ಹೋರಾಟ ಸಮಿತಿ ಸದಸ್ಯರು ಭಾಗವಹಿಸಿದ್ದರು. ಪ್ರತಿಭಟನೆಯಲ್ಲಿ ನಿರತರಾಗಿದ್ದವರು ಶಾಲಾ ಮುಖ್ಯೋಪಾಧ್ಯಾಯರನ್ನು ವಿನಂತಿಸಿ ಈ ಅಧ್ಯಾಪಕನಿಗೆ ತರಗತಿ ನಡೆಸಲು ಬಿಡುವುದಿಲ್ಲ ಎಂದು ಮುನ್ನೆಚ್ಚರಿಕೆ ನೀಡಿದರು. ಇದರಿಂದ ಶಾಲಾ ಮುಖ್ಯೋಪಾಧ್ಯಾಯರು ಜಿಲ್ಲಾ ಶಿಕ್ಷಣ ಉಪ ನಿರ್ದೇಶಕ(ಡಿಡಿಇ) ಅವರಿಗೆ ಮಾಹಿತಿ ನೀಡಿದರು.
ಇದರಂತೆ ಡಿಡಿಇ ಅವರು ಕೂಲಂಕುಶ ಪರಿಶೀಲಿಸಿ ಒಂದು ವಾರದೊಳಗೆ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು. ಈ ಅಧ್ಯಾಪಕ ಪಾಠ ಮಾಡದಂತೆ ತಡೆಯುವುದಾಗಿ ಮುನ್ನೆಚ್ಚರಿಕೆ ನೀಡಲಾಗಿದೆ.
ಅ.13 ರಂದು ರಕ್ಷಕ ಶಿಕ್ಷಕ ಸಂಘದ ಸಭೆ ಸೇರಿ ಮುಂದಿನ ಕ್ರಮಗಳ ಬಗ್ಗೆ ತೀರ್ಮಾನಿಸಲಿದೆ. ಸತ್ಯಾಗ್ರಹದಲ್ಲಿ ಉದುಮ-ಬೇಕಲ ಕನ್ನಡ ವಿದ್ಯಾರ್ಥಿಗಳ ಸಂರಕ್ಷಣ ಸಮಿತಿಯ ಗೌರವಾಧ್ಯಕ್ಷ ವಾಸುದೇವ ಬಟ್ಟತ್ತೂರು, ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು, ಸೀತಾರಾಮ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು, ವಿದ್ಯಾರ್ಥಿಗಳು, ಹೆತ್ತವರು ಪಾಲ್ಗೊಂಡರು.






