ಕಾಸರಗೋಡು: ಪೈವಳಿಕೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಕಲೋತ್ಸವದ ಪ್ರೌಢಶಾಲಾ ವಿಭಾಗ ಕನ್ನಡ ನಾಟಕ ಸ್ಪರ್ಧೆಯಲ್ಲಿ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ `ಕಾಲಚಕ್ರ' ನಾಟಕ ಎ ಶ್ರೇಣಿಯೊಂದಿಗೆ ಪ್ರಥಮ ಬಹುಮಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ. ಜತೆಗೆ ಉತ್ತಮ ನಟ ಹಾಗೂ ಉತ್ತಮ ನಟಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಉತ್ತಮ ನಟನಾಗಿ ವಿವೇಕ ರೈ ಹಾಗೂ ಉತ್ತಮ ನಟಿಯಾಗಿ ಧನ್ಯಶ್ರೀ ಆಯ್ಕೆಯಾಗಿದ್ದಾರೆ. ಕಾಲ ಬದಲಾದಂತೆ ಜನರ ಜೀವನದಲ್ಲಾಗುವ ಬದಲಾವಣೆ, ವಯಸ್ಸಾದ ತಂದೆ-ತಾಯಿಯAದಿರನ್ನು ನಿರ್ಲಕ್ಷಿಸುವ ಈಗಿನ ಸಮಾಜದ ಚಿತ್ರಣ ನಾಟಕದಲ್ಲಿದೆ. ಹೊರರಾಜ್ಯ ಕಾರ್ಮಿಕರಿಂದ ನಮ್ಮ ರಾಜ್ಯದಲ್ಲಿ ಉಂಟಾಗುವ ತೊಂದರೆಗಳನ್ನು ಈ ನಾಟಕ ಎತ್ತಿತೋರಿಸಿದೆ.
ನಾಟಕದಲ್ಲಿ ಬಯ್ಯಾ ಪಾತ್ರದಲ್ಲಿ ವಿವೇಕ್ ರೈ, ಅಜ್ಜಿಯಾಗಿ ಶ್ರೇಯ ಶೆಟ್ಟಿ, ಬೆಳ್ಳಿಯಾಗಿ ಧನ್ಯಶ್ರೀ, ವೈದ್ಯರಾಗಿ ತುಳಸಿ ಎಂ., ವಿಜ್ಞಾನಿಯಾಗಿ ಕೃಪೇಶ್, ಮಗನ ಪಾತ್ರದಲ್ಲಿ ಕಾವ್ಯ, ಸೊಸೆಯಾಗಿ ಮಧುರ ಪಿ. ಅಭಿನಯಿಸಿದರು. ಸಂಗೀತದಲ್ಲಿ ಅಮೀಶ, ದಿವ್ಯಶ್ರೀ, ಅಶ್ವಿನಿ ಸಹಕರಿಸಿದರು.
ಸದಾಶಿವ ಮಾಸ್ಟರ್ ಪೊಯ್ಯೆ ರಚಿಸಿ ನಿರ್ದೇಶಿಸಿರುವ ನಾಟಕಕ್ಕೆ ಶಿವಪ್ರಸಾದ ಚೆರುಗೋಳಿ ಸಹನಿರ್ದೇಶನ ನಡೆಸಿದ್ದಾರೆ. ಅಧ್ಯಾಪಕರಾದ ಪ್ರಶಾಂತ ಹೊಳ್ಳ ಎನ್, ರಾಜಕುಮಾರ್ ಕೆ., ಪ್ರದೀಪ್ ಕರ್ವಾಜೆ, ವಸಂತ ಮೂಡಂಬೈಲು ಹಾಗೂ ಪ್ರಸಾದ್ ಮುಗು ಸಹಕರಿಸಿದರು.





