ತಿರುವನಂತಪುರ: ಪೌರತ್ವ ತಿದ್ದುಪಡಿ ಕಾನೂನು ಪರವಾಗಿ ದೇಶಾದ್ಯಂತ ಆರಂಭಗೊಂಡಿರುವ ಜನಜಾಗೃತಿ ಕಾರ್ಯಕ್ರಮದ ಅಂಗವಾಗಿ ಜನವರಿ 15ರಂದು ಬಿಜೆಪಿ ರಾಜ್ಯಸಮಿತಿ ಕೋಯಿಕ್ಕೋಡಿನಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಸಂದರ್ಭ ನಡೆಯುವ ಜನಜಾಗೃತಿ ರ್ಯಾಲಿಯನ್ನು ಬಿಜೆಪಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‍ಷಾ ಉದ್ಘಾಟಿಸಿ ಮಾತನಾಡುವರು.
ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ನಡೆಯುತ್ತಿರುವ ವ್ಯಾಪಕ ಸುಳ್ಳು ಪ್ರಚಾರ ಹಾಗೂ ಕಾನೂನಿನ ವಾಸ್ತವ ಚಿತ್ರಣ ನೀಡುವ ನಿಟ್ಟಿನಲ್ಲಿ ಬಿಜೆಪಿ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಮಿತ್‍ಷಾ ಕೇರಳ ಭೇಟಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಭಾರಿ ಭದ್ರತೆ ಕೈಗೊಳ್ಳಲಾಗುತ್ತಿದೆ. ಜನಜಾಗೃತಿ ಕಾರ್ಯಕ್ರಮ ನಡೆಯುವ ಕೋಯಿಕ್ಕೋಡಿನಲ್ಲಿ ಭದ್ರತೆ ಮತ್ತಷ್ಟು ಬಿಗುಗೊಳಿಸಲಾಗುತ್ತಿದೆ. ಈ ಮಧ್ಯೆ ಜನವರಿ 14ರಂದು ಬಿಜೆಪಿ ಕೇರಳ ಘಟಕಕ್ಕೆ ನೂತನ ಅಧ್ಯಕ್ಷರನ್ನು ಕೇಂದ್ರಸಮಿತಿ ಘೋಷಿಸಲಿದ್ದು, ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಕೇರಳದಲ್ಲಿ ನಡೆಯಲಿರುವ ಮೊದಲ ಕಾರ್ಯಕ್ರಮದ ಜವಾಬ್ದಾರಿಯೂ ಹೊಸ ಅಧ್ಯಕ್ಷರ ಹೆಗಲೇರಲಿದೆ.





