ಕಾಸರಗೋಡು: ಸೇತುವೆ ದುರಸ್ತಿಗಾಗಿ ಕಾಸರಗೋಡು-ಕಾಞಂಗಾಡು ಕೆಎಸ್‍ಟಿಪಿ ರಸ್ತೆಯನ್ನು ಮುಚ್ಚುಗಡೆಗೊಳಿಸಿದ ಹಿನ್ನೆಲೆಯಲ್ಲಿ ಕಾಸರಗೋಡು-ವಿದ್ಯಾನಗರ-ಚೆರ್ಕಳ ಹೆದ್ದಾರಿಯಲ್ಲಿ ವಾಹನದಟ್ಟಣೆ ಹೆಚ್ಚಾಗಿ ಭಾರಿ ಟ್ರಾಫಿಕ್ ಜಾಮ್ ಗೆ ಕಾರಣವಾಗುತ್ತಿದೆ.
ಕೆಎಸ್‍ಟಿಪಿ ರಸ್ತೆಯ ಚಂದ್ರಗಿರಿ ಸೇತುವೆಯಲ್ಲಿ ಅಲ್ಲಲ್ಲಿ ಬೃಹತ್ ಬಿರುಕು ಹಾಗೂ ಸೇತುವೆ ಕಾಲ್ನಡಿಗೆ ಹಾದಿಯ ಅಂಚಿನ ಕಾಂಕ್ರೀಟ್ ಪಿಲ್ಲರ್‍ಗಳು ಒಡೆದಿದ್ದು, ದುರಸ್ತಿನಡೆಸುವ ನಿಟ್ಟಿನಲ್ಲಿ ಈ ಹಾದಿಯಾಗಿ ವಾಹನಸಂಚಾರ ಮುಚ್ಚುಗಡೆಗೊಳಿಸಲಾಗಿದೆ. ಈ ಹಾದಿಯಾಗಿ ಸಂಚರಿಸುವ ವಾಹನಗಳು ಕಾಸರಗೋಡಿನಿಂದ ವಿದ್ಯಾನಗರ, ನಾಯಮರ್‍ಮೂಲೆ ಮೂಲಕ ಚೆರ್ಕಳ ಹೆದ್ದಾರಿಯಾಗಿ ಕಾಞಂಗಾಡು ಭಾಗಕ್ಕೆ ಹಾಗೂ ಪೆರುಂಬಳ ಸೇತುವೆ ಮೂಲಕ ಶಿವಪುರಂ, ಪಾಲಿಚ್ಚಾಲನಡ್ಕ, ಪರವನಡ್ಕ ಹಾದಿಯಾಗಿ ಮೇಲ್ಪರಂಬಕ್ಕೆ ಸಾಗುತ್ತಿದೆ. ಇದರಿಂದ ನಾಯಮರ್‍ಮೂಲೆ ಜಂಕ್ಷನ್‍ನಲ್ಲಿ ವಾಹನಗಳ ದಟ್ಟಣೆ ಹೆಚ್ಚಲು ಕಾರಣವಾಗಿದೆ. ಬೆಳಗ್ಗೆ ಮತ್ತು ಸಾಯಂಕಾಲ ಈ ಹಾದಿಯಾಗಿ ಸಂಚರಿಸಲು ಹರಸಾಹಸ ಪಡಬೇಕಾಗುತ್ತಿದೆ. ನಾಯಮರ್‍ಮೂಲೆಯಿಂದ ಕಾಸರಗೋಡಿಗಿರುವ ಆರು ಕಿ.ಮೀ ದೂರ ಸಂಚರಿಸಲು ಒಂದು ತಾಸುವರೆಗೆ ಕಾಯಬೇಕಾಗುತ್ತಿದೆ. ಇದಕ್ಕಾಗಿ ಕೆಲವು ಕಾಸರಗೋಡಿನಿಂದ ಚೆಮ್ನಾಡ್ ಸಂಚರಿಸುವವರು ಕಾಲ್ನಡಿಗೆಯಾಗಿ ಚಂದ್ರಗಿರಿ ಸೇತುವೆ ಮೂಲಕ ತೆರಳುತ್ತಿದ್ದಾರೆ.




