ಮಂಜೇಶ್ವರ: ಗಾಂಧಿ ಚಿಂತನೆ ಎಂದಿಗೂ ಪ್ರಸ್ತುತ ಹಾಗೂ ಸಾರ್ವಕಾಲಿಕ. ಅದನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪತ್ರಕರ್ತ ಡೊಂಬಯ್ಯ ಇಡ್ಕಿದು ಹೇಳಿದರು.
ಅವರು ಸುಳ್ಯಮೆ ರೂಪಕಲಾ ಗ್ರಂಥಾಲಯದಲ್ಲಿ ಇತ್ತೀಚೆಗೆ ನಡೆದ ಗಾಂಧಿಸ್ಮøತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಾಂಧೀಜಿಯ ಸರ್ವೋದಯ ತತ್ವ ಎಲ್ಲ ವರ್ಗ, ಧರ್ಮ ಹಾಗೂ ಜಾತೀಯತೆ ಮೀರಿದ ತತ್ವ. ಸರ್ವರ ಏಳಿಗೆಗೆ ಅದು ಸಹಕಾರಿಯಾಗಿದೆ. ಆದರೆ ದೇಶದಲ್ಲಿ ಈ ತತ್ವ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಸರ್ವರಿಗೂ ಸಮಪಾಲು ಸಮಬಾಳು ತತ್ವದ ಅನುಷ್ಠಾನವಾದಾಗಲೇ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು. ಗಾಂಧೀಜಿಯವರಿಗೆ ಜೋಹಾನ್ಸ್‍ಬರ್ಗ್‍ನಿಂದ ದರ್ಬನ್ ಪ್ರಯಾಣಿಸುವ ವೇಳೆ ಆಕಸ್ಮಿಕವಾಗಿ ಅನ್ ಟು ದ ಲಾಸ್ಟ್ ಕೃತಿಯ ಪರಿಚಯ ಆಯಿತು. ಈ ಕೃತಿ ಅವರ ಜೀವನದ ಗತಿ ಬದಲಿಸಿತು ಎಂದು ಅವರು ನೆನಪಿಸಿದರು.
ಕಾರ್ಯಕ್ರಮದಲ್ಲಿ ಮಂಜೇಶ್ವರ ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಹುಸೈನ್ ಮಾಸ್ತರ್, ವರ್ಕಾಡಿ ಗ್ರಾ.ಪಂ ಸದಸ್ಯೆ ಗೀತಾ ಸಾಮಾನಿ ಸಹಿತ ಗ್ರಂಥಾಲಯದ ಪದಾಧಿಕಾರಿಗಳು ಉಪಸ್ಥಿತರಿದ್ದರು.




