ಮುಳ್ಳೇರಿಯ: ಕಾರಡ್ಕ ಬ್ಲಾಕ್ ಪಂಚಾಯತಿ ವ್ಯಾಪ್ತಿಯಲ್ಲಿ ಇನ್ನು ಮುಂದೆ ಬಂಜರು ಭೂಮಿಯಿರಲಾರದು. ಬಂಜರಾಗಿರುವ ಜಾಗಗಗಳನ್ನೇ ಆಯ್ದು ತರಕಾರಿ ಕೃಷಿ ಬೆಳಯುವ ಮೂಲಕ ಹೊಸ ಕ್ರಾಂತಿಗೆ ಇಲ್ಲಿ ಚಾಲನೆ ನೀಡಲಾಗಿದೆ. ಬ್ಲಾಕ್ ಪಂಚಾಯತಿಯ 2017-22ರ ಯೋಜನೆಯಲ್ಲಿ ಅಳವಡಿಸಿ ಬಂಜರು ಭೂಮಿ ರಹಿತ ಬ್ಲಾಕ್ ಸೃಷ್ಟಿಸುವ ಉದ್ದೇಶದೊಂದಿಗೆ ಇಲ್ಲೀಗ ತ್ವರಿತ ಚಟುವಟಿಕೆಗಳು ನಡೆಯುತ್ತಿವೆ. ಇದರ ಸಕಾರಾತ್ಮಕ ಪರಿಣಾಮ ಇಡೀ ನಾಡಿಗೇ ಲಭಿಸಲಿದೆ.
ಬಂಜರು ಭೂಮಿಗಳನ್ನು ಮಾಲೀಕರಿಂದ ಲೀಸ್ ಗೆ ಪಡೆದು ಕುಟುಂಬಶ್ರೀ ಘಟಕಗಳು ಇಲ್ಲಿ ಕೃಷಿ ನಡೆಸಲಿವೆ. ಸೂಕ್ತ ಸಂರ್ಷಣೆಗಳೊಂದಿಗೆ ಜೈವಿಕ ರೀತಿ ಬೆಳೆಯುವ ಪರಿಣಾಮ ಇಲ್ಲಿ ವಿಷಮುಕ್ತ ತರಕಾರಿಗಳು ಲಭಿಸಲಿವೆ. ಇಲ್ಲಿ ಬೆಳೆಯಲಾಗುವ ಜೈವಿಕ ತರಕಾರಿಗಳು ಇಕೋ ಶಾಪ್ ಮತ್ತು "ಎ"ಶ್ರೇಣಿಯ ಕ್ಲಸ್ಟರ್ ಮಾರುಕಟ್ಟೆಗಳಲ್ಲಿ ಲಭಿಸಲಿವೆ.
ಆರೋಗ್ಯ, ಮನೆಗಳ ಗುಣಮಟ್ಟ,ತರಕಾರಿ ಬೆಳೆಯುವಲ್ಲಿ ಸ್ವಾವಲಂಬಿಗಳಾಗುವುದು ಇತ್ಯಾದಿ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. 24.834 ಹೆಕ್ಟೇರ್ ಜಾಗದ ಬಂಜರು ಭೂಮಿಯನ್ನು ಕೃಷಿಯೋಗ್ಯವಾಗಿಸುವ ಗುರಿ ಇರಿಸಿಕೊಳ್ಳಲಾಗಿದೆ. ಕೃಷಿ ಇಲಾಖೆ ಜಾರಿಗೊಳಿಸುವ 50 ಹೆಕ್ಟೇರ್ ಜಾಗದಲ್ಲಿ ಈಗಾಗಲೇ ನಡೆಸಿರುವ ತರಕಾರಿ ಕೃಷಿ ಅಲ್ಲದೇ ಈ
ಗುರಿ ಇರಿಸಿಕೊಳ್ಳಲಾಗಿದೆ. ಸಾಂಪ್ರದಾಯಿಕ ಶೈಲಿಯಲ್ಲಿ ನಡೆಸಲಾಗುವ ಕೃಷಿಯಲ್ಲಿ ಮುಳ್ಳುಸೌತೆ, ಹಸಿಮೆಣಸು, ಹರಿವೆ, ಅಲಸಂಡೆ ಇತ್ಯಾದಿ ಕೃಷಿ ಈಗಾಗಲೇ ನಡೆಸಲಾಗಿದೆ. ಕೃಷಿಭವನ ಮೂಲಕ ಪತ್ತೆಮಾಡಲಾದ ಜಾಗದಲ್ಲಿ ಕೃಷಿ ಆರಂಭಿಸಲಾಗಿದೆ.
ಅರ್ಜಿ ಆಹ್ವಾನ:
ಕುಟುಂಬಶ್ರೀ ಘಟಕಗಳು ಬಂಜರು ಭೂಮಿಯಲ್ಲಿ ತರಕಾರಿ ಕೃಷಿ ನಡೆಸುವ ನಿಟ್ಟಿನಲ್ಲಿ ಕಾರಡ್ಕ ಬ್ಲಾಕ್ ಪಂಚಾಯತಿ ನೀಡುವ ಸೌಲಭ್ಯಗಳಿಗಾಗಿ ಅರ್ಜಿ ಸಲ್ಲಿಸಬಹುದು. ಆಯಾ ಗ್ರಾಮ ಪಂಚಾಯತಿ ಸಮಿತಿ ಮಂಜೂರು ಮಾಡಿರುವ ಫಲಾನುಭವಿ ಪಟ್ಟಿಯನ್ನು ಬ್ಲಾಕ್ ಪಂಚಾಯತಿಗೆ ಕಳುಹಿಸಲಾಗುವುದು. ಲೀಸ್ ಪಡೆದು ಕೃಷಿ ನಡೆಸುವ ನಿಬಂಧನೆಯಲ್ಲಿ ಈ ಸೌಲಭ್ಯ ಲಭಿಸಲಿದೆ. ಭೂಮಾಲೀಕರು 200 ರೂ.ನ ಛಾಪಾಪತ್ರದಲ್ಲಿ ಕೃಷಿಜಾಗವನ್ನು ಕುಟುಂಬಶ್ರೀ ಘಟಕಕಕ್ಕೆ ಒಪ್ಪಿಗೆ ನೀಡಿರುವ ಬಗ್ಗೆ 2019-20 ವರ್ಷದಲ್ಲಿ ತೆರಿಗೆ ಪಾವತಿಸಿದ ರಶೀದಿಯ ನಕಲು ಸಹಿತ ಸಲ್ಲಿಸಬೇಕು. ಫಲಾನುಭವಿಗಳಿಗೆ ಕೃಷಿ ನಡೆಸಲು ಹೆಕ್ಟೇರ್ ಒಂದಕ್ಕೆ 25 ಸಾವಿರ ರೂ., ಭೂಮಾಲೀಕರಿಗೆ 5 ಸಾವಿರ ರೂ. ಲಭಿಸಲಿದೆ. ಕನಿಷ್ಠ 25 ಸೆಂಟ್ಸ್ ಜಾಗದಲ್ಲಿ ಈ ಯೋಜನೆ ಪ್ರಕಾರದ ಕೃಷಿ ನಡೆಸಲಾಗುವುದು. ಕುಟುಂಬಶ್ರೀ ಘಟಕ ಮತ್ತು ಭೂಮಾಲೀಕರಿಗೆ ಐ.ಎಫ್.ಸಿ. ಕೋಡ್ ಮತ್ತು ಕೋರ್ ಬ್ಯಾಂಕಿಂಗ್ ಸೌಲಭ್ಯದ ಠೇವಣಿ ಇರಬೇಕು ಎಂದು ಅಧಿಕೃತರು ತಿಳಿಸಿರುವರು.



