ಬದಿಯಡ್ಕ: ನೀರ್ಚಾಲು ಮದಕ ನವೀಕರಣ ಯೋಜನೆ ಪ್ರದೇಶದ ಕೆಂಪು ಮಣ್ಣು ದಾಖಲೆ ಪತ್ರಗಳಿಲ್ಲದೆ ಸಾಗಾಟ ನಡೆಸಲಾಗಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಅಸಂಬದ್ಧ ಎಂದು ಕೆರೆ ನಿರ್ಮಾಣ ಸಮಿತಿ ಸಂಚಾಲಕ ಎಂ.ಎಚ್.ಜನಾರ್ದನ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನೀರ್ಚಾಲು ಕೆರೆಯ ಕೆಂಪು ಮಣ್ಣು ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ಕಂದಾಯ ಇಲಾಖಾಧಿಕಾರಿಯವರ ನಿರ್ದೇಶಾನುಸಾರ ಕಂದಾಯ ಇಲಾಖೆಯು ಆ.3 ರಂದು ಬಹಿರಂಗ ಹರಾಜು ಮೂಲಕ 5000 ಟನ್ ಕೆಂಪು ಮಣ್ಣು ಹರಾಜು ಖಾಯಂ ಗೊಳಿಸಲಾಗಿತ್ತು. ಹರಾಜಿನಲ್ಲಿ ಖರೀದಿಸಿದವರು ಟನ್ ಒಂದರ 120 ರೂಪಾಯಿ ಹಾಗು ಜಿ.ಎಸ್.ಟಿ. ಕಂದಾಯ ಇಲಾಖೆಗೆ ಸಲ್ಲಿಸಿ ಭೂಗರ್ಭ ಖನನ ಇಲಾಖೆಯಿಂದ ಪರವಾನಿಗೆ ಮೂಲಕ ಸಾಗಿಸಲಾಗುತ್ತಿದೆ. ಜಿಲ್ಲಾಧಿಕಾರಿಯವರ ನಿರ್ದೇಶನದ ಮೂಲಕ ನಡೆಯುವ ಕೆರೆ ನಿರ್ಮಾಣಕ್ಕೆ ಸಂಬಂಧಪಟ್ಟ ಕಾರ್ಯಗಳು ಪಾರದರ್ಶಕವಾಗಿರುವಾಗ ಅಕ್ರಮ ಆಗುವುದು ಹೇಗೆ ಎಂದು ಅವರು ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.



