ಮುಳ್ಳೇರಿಯ: ಬೈಕ್ ಗೆ ಅತಿ ವೇಗದಲ್ಲಿ ಆಗಮಿಸಿದ ಕಾರೊಂದು ಡಿಕ್ಕಿಹೊಡೆದು ಬೈಕ್ ಪ್ರಯಾಣಿಕರಾದ ದಂಪತಿಗಳು ಸ್ಥಳದಲ್ಲೇ ದಾರುಣರಾಗಿ ಮೃತಪಟ್ಟ ಘಟನೆ ಇಂದು ಕಾರಡ್ಕದಲ್ಲಿ ಸಂಭವಿಸಿದೆ.
ಮುಳ್ಳೇರಿಯದಲ್ಲಿ ಕ್ಷೌರಿಕರಾಗಿ ವೃತ್ತಿ ನಿರ್ವಹಿಸುತ್ತಿದ್ದ ಗೋವಿಂದ ರಾಜ್(52) ಹಾಗೂ ಅವರ ಪತ್ನಿ ಉಮಾ(43)ಮೃತಪಟ್ಟ ದುರ್ದೈವಿಗಳು. ಇವರು ಮುಳ್ಳೇರಿಯದತ್ತ ಸಂಚರಿಸುತ್ತಿದ್ದಾಗ ಮುಳ್ಳೇರಿಯ ಭಾಗದಿಂದ ಆಗಮಿಸಿದ ಪೋರ್ಚೂನರ್ ಕಾರು ಡಿಕ್ಕಿಹೊಡೆದು 13ನೇ ಮೈಲಿನಲ್ಲಿ ಅಪಘಾತ ಸಂಭವಿಸಿದೆ. ಅತಿಯಾದ ವೇಗದಲ್ಲಿದ್ದ ಕಾರಿನ ಆಘಾತದಿಂದ ಬೈಕ್ ಕಾರಿನಡಿ ಪುಡಿಗಟ್ಟಿದ್ದು, ದಂಪತಿಗಳು ಸ್ಥಳದಲ್ಲೇ ಕೊನೆಯುಸಿರೆಳೆದರು. ಇಂದು 11 ರ ಸುಮಾರಿಗೆ ಘಟನೆ ನಡೆದಿದೆ. ಕಾರು ಚಾಲಕ ನಿದ್ರಿಸಿರುವುದು ಅಪಘಾತಕ್ಕೆ ಕಾರಣವೆನ್ನಲಾಗಿದೆ. ಆದೂರು ಪೋಲೀಸರು ದೂರು ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮಹಜರಿಗೆ ಕೊಂಡೊಯ್ಯಲಾಗಿದೆ.
ಮೂಲತಃ ತಮಿಳುನಾಡು ನಿವಾಸಿಯಾದ ಗೋವಿಂದರಾಜ್ ಹಲವು ವರ್ಷಗಳಿಂದ ಕಾರಡ್ಕದಲ್ಲಿ ವಾಸಿಸುತ್ತಿದ್ದು, ಮುಳ್ಳೇರಿಯದಲ್ಲಿ ಕ್ಷೌರದಂಗಡಿ ನಡೆಸುತ್ತಿದ್ದಾರೆ. ಮೃತರು ಇಬ್ಬರು ಪುತ್ರರು, ಪುತ್ರಿ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.






