ಮಂಜೇಶ್ವರ: ಸೌರವ್ಯೂಹ ಮತ್ತು ವಿಜ್ಞಾನದ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದು ವಿಜ್ಞಾನ ಮುಂದುವರಿದಿದ್ದರೂ ಇನ್ನೂ ಕೂಡಾ ನಮ್ಮಲ್ಲಿ ಮೂಢ ನಂಬಿಕೆಗಳು ಮನೆ ಮಾಡಿರುವುದು ವಿಪರ್ಯಾಸವೆಂದು, ಇಂತಹ ತಪ್ಪು ನಂಬಿಕೆಗಳನ್ನು ಹೋಗಲಾಡಿಸಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಉದ್ದೇಶದಿಂದ ವಿದ್ಯಾಭ್ಯಾಸ ಇಲಾಖೆಯು ಈ ರೀತಿಯ `ವಿಜ್ಞಾನ ಸಂಗಮ' ಎಂಬ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ. ಹೇಳಿದರು.
ಅವರು ಬಂಗ್ರಮಂಜೇಶ್ವರ ಸರ್ಕಾರಿ ಉನ್ನತ ಪ್ರೌಢ ಶಾಲೆಯಲ್ಲಿ ಶುಕ್ರವಾರ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ `ವಿಜ್ಞಾನ ಸಂಗಮ' ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಮಾರಂಭದ ಉದ್ಘಾಟನೆಯನ್ನು ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷ ಅಬ್ದುಲ್ ಅಝೀಜ್ ಹಾಜಿ ನೆರವೇರಿಸಿದರು. ಮಂಜೇಶ್ವರ ಗ್ರಾಮ ಪಂಚಾಯತಿ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಕ್ಷ ಅಬ್ದುಲ್ ರಹಿಮಾನ್ ಹಾಜಿ ಕೆ.ಎಂ.ಕೆ. ಅಧ್ಯಕ್ಷತೆ ವಹಿಸಿದರು. ಗ್ರಾಮ ಪಂಚಾಯತಿ ಸದಸ್ಯ ಝಿಯಾನ, ಬ್ಲಾಕ್ ನಿರೂಪಣಾಧಿಕಾರಿ ಗುರುಪ್ರಸಾದ್ ರೈ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಶ್ರಫ್ ಬಿ.ಎಂ, ನಿವೃತ್ತ ಮುಖ್ಯ ಶಿಕ್ಷಕಿ ಲೋಲಾಕ್ಷಿ, ಮಾತೃಸಂಘದ ಅಧ್ಯಕ್ಷೆ ಅಸ್ಮಾ, ಹಿರಿಯ ಶಿಕ್ಷಕಿ ಗಾಯತ್ರಿ, ಸಿಬ್ಬಂದಿ ಕಾರ್ಯದರ್ಶಿ ಶಾಲಿನಿ ಟೀಚರ್ ಮುಂತಾದವರು ಉಪಸ್ಥಿತರಿದ್ದರು. ಸಮಾರಂಭದ ಬಳಿಕ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಮತ್ತು ವೃತ್ತಿ ಪರಿಚಯ, ವಿಷಯಗಳಿಗೆ ಸಂಬಂಧಿಸಿ ಚಟುವಟಿಕೆಗಳು ನಡೆದವು.
ಮಂಜೇಶ್ವರ ಉಪಜಿಲ್ಲೆಯ ಹಿರಿಯ ಪ್ರಾಥಮಿಕ ಹಾಗು ಹೈಸ್ಕೂಲ್ ವಿಭಾಗಗಳಿಂದಾಗಿ 103 ಮಂದಿ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ಸಮಾರಂಭದಲ್ಲಿ ವಿಜ್ಞಾನ ಸಂಗಮದ ಸಂಚಾಲಕ ಕೃಷ್ಣವೇಣಿ ಟೀಚರ್ ಪ್ರಾಸ್ತಾವಿಕ ಮಾತನಾಡಿದರು. ಶಾಲಾ ಪ್ರಾಂಶುಪಾಲ ಸುರೇಶ್ ಕುಮಾರ್ ಸ್ವಾಗತಿಸಿ, ಮುಖ್ಯ ಶಿಕ್ಷಕಿ ಸುನೀತಾ ವಂದಿಸಿದರು. ಸಿಲ್ವಿಯಾ ಟೀಚರ್ ಕಾರ್ಯಕ್ರಮ ನಿರೂಪಿಸಿದರು.




