ವಾರ್ಷಿಕ ಜಾತ್ರೆಯ ಸಂಭ್ರಮದಲ್ಲಿ ಕುಂಬಳೆ
ಕುಂಬಳೆ: ಕುಂಬಳೆ ಸೀಮೆಯ ಪ್ರಮುಖ ನಾಲ್ಕು ದೇವಸ್ಥಾನಗಳಲ್ಲಿ ಒಂದಾದ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಮಂಗಳವಾರ ಬೆಳಿಗ್ಗೆ ಧ್ವಜಾರೋಹಣಗೊಳ್ಳುವುದರೊಂದಿಗೆ ಆರಂಭಗೊಂಡಿತು. ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿ ನೇತೃತ್ವದಲ್ಲಿ ವೈದಿಕ ವಿಧಿವಿಧಾನಗಳು ನೆರವೇರಿದವು.
ಬೆಳಿಗ್ಗೆ 8ಕ್ಕೆ ಪಯ್ಯನ್ನೂರು ಕೆ.ವಿ.ರಾಜನ್ ಮಾರಾರ್ ಅವರಿಂದ ಅಷ್ಟಪದಿ ಸೋಪಾನ ಸಂಗೀತ, 9.30ಕ್ಕೆ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಶ್ರೀಗೋಪಾಲಕೃಷ್ಣ ಸೇವಾ ಸಮಿತಿ ಕೃಷ್ಣನಗರ, ಸಂಪಿಗೆ ಕಟ್ಟೆ ಶ್ರೀವನದುರ್ಗ ವನಶಾಸ್ತಾರ ಕ್ಷೇತ್ರ ಸಮಿತಿ ಕುಂಟಂಗೇರಡ್ಕ, ಕುಂಡಾಪುಗುತ್ತು ತರವಾಡು ಹಾಗೂ ಊರ ಹತ್ತು ಸಮಸ್ತರ ತಂಡ, ಶ್ರೀಸದ್ಗುರು ನಿತ್ಯಾನಂದ ಸ್ವಾಮಿ ಮಹಿಳಾ ಭಜನಾ ಸಂಘ ಅವರಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣಾ ಮೆರವಣಿಗೆ ನಡೆಯಿತು. ಬೆಳಿಗ್ಗೆ 10ಕ್ಕೆ ಶ್ರೀಬಲಿ, ಧ್ವಜಾರೋಹಣ, ತುಲಾಭಾರ ಸೇವೆ, ಮಹಾಪೂಜೆ, ನಿತ್ಯಬಲಿ, ಅನ್ನಸಂತರ್ಪಣೆಗಳು ನೆರವೇರಿದವು. ಸಾವಿರಾರು ಜನರು ಪಾಲ್ಗೊಂಡರು. ಸಂಜೆ 5ಕ್ಕೆ ನಡೆತೆರೆದು, 6.30ಕ್ಕೆ ದೀಪಾರಾಧನೆ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಅಮಲ್ ರಾಜ್ ಪಿ.ಎಸ್ ಬಳಗದವರಿಂದ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ರಾತ್ರಿ 8.30ರಿಂದ ಉತ್ಸವ ಬಲಿ, ರಂಗಪೂಜೆಗಳು ನಡೆಯಿತು.
ಇಂದಿನ ಕಾರ್ಯಕ್ರಮ:
ಬೆಳಿಗ್ಗೆ 6ರಿಂದ ಉತ್ಸವ, ಶ್ರೀಭೂತಬಲಿ, 10.30ರಿಂದ ತುಲಾಭಾರ ಸೇವೆ, 12.30ಕ್ಕೆ ಮಹಾಪೂಜೆ, ನಿತ್ಯಬಲಿ, 12 ರಿಂದ ಅನ್ನದಾನ, ಸಂಜೆ 4.30ಕ್ಕೆ ನಡೆತೆರೆಯುವುದು, 6.30ಕ್ಕೆ ದೀಪಾರಾಧನೆ, 7 ರಿಂದ 8ರ ವರೆಗೆ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಬಾಲ ಪ್ರತಿಭೆ ಸಮನ್ವಿತಾ ಗಣೇಶ್ ಅಣಂಗೂರು ಅವರಿಂದ ಭಕ್ತಿಸಂಗೀತ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8.30 ರಿಂದ ಸಣ್ಣ ದೀಪೋತ್ಸವ, ಶ್ರೀಬಲಿ, ಪೂಜೆ ನಡೆಯಲಿದೆ. ರಾತ್ರಿ 11.30 ರಿಂದ ಕಟೀಲು ಶ್ರೀದುರ್ಗಾಪರಮೇಶ್ವರಿ ಕೃಪಾಪೋಶಿತ ಯಕ್ಷಗಾನ ಮಂಡಳಿಯವರಿಂದ ಶ್ರೀದೇವೀ ಮಹಾತ್ಮ್ಯೆ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ.
ಉತ್ಸವವಾದ ಕುಂಬಳೆ:
ಜಾತ್ರೋತ್ಸವದ ಹಿನ್ನೆಲೆಯಲ್ಲಿ ಕುಂಬಳೆ ಪೇಟೆ ಸಂಪೂರ್ಣ ಕೇಸರಿ ಧ್ವಜ ಸಹಿತ ವರ್ಣಾಲಂಕಾರಗಳೊಂದಿಗೆ ಕಂಗೊಳಿಸುತ್ತಿದೆ. ಪೇಟೆಯ ಹೃದಯ ಭಾಗದಲ್ಲಿ ಬೃಹತ್ ಕೇಸರಿ ಧ್ವಜ, ಬಾವುಟಗಳು ರಾರಾಜಿಸುತ್ತಿವೆ. ರಾ.ಹೆದ್ದಾರಿಯಿಂದ ಕುಂಬಳೆ ಪ್ರವೇಶಿಸುವಲ್ಲಿ ಮತ್ತು ಬದಿಯಡ್ಕ ರಸ್ತೆಯಲ್ಲಿರುವ ಪೆಟ್ರೋಲ್ ಪಂಪ್ ಸನಿಹ ಬೃಹತ್ ಆಕರ್ಷಕ ಪ್ರವೇಶ ದ್ವಾರಗಳನ್ನೂ ನಿರ್ಮಿಸಲಾಗಿದೆ. ಪೇಟೆಯಿಂದ ಶ್ರೀಕ್ಷೇತ್ರಕ್ಕೆ ತೆರಳುವ ಪೋಲೀಸ್ ಠಾಣಾ ರಸ್ತಿಯ ಇಕ್ಕೆಕಲಗಳಲ್ಲಿ ವೈವಿಧ್ಯಮಯ ಮಾರಾಟ ಸಂತೆಗಳು ಗಮನ ಸೆಳೆಯುತ್ತಿವೆ. ತಿಂಡಿ-ತಿನಸು, ಸಿಹಿವಸ್ತುಗಳು, ಹಣ್ಣಿನ ಪೇಯ, ಐಸ್ ಕ್ರೀಂ, ಮಕ್ಕಳ ಆಟದ ವಸ್ತುಗಳು, ಬಟ್ಟೆಬರೆ, ಪ್ಲಾಸ್ಟಿಕ್ ಉತ್ಪನ್ನಗಳ ಕೇಂದ್ರಗಳಿಗೆ ಮಂಗಳವಾರದಿಂದಲೇ ಸಾರ್ವಜನಿಕರು ಮತಗಳ ಬೇಧವಿಲ್ಲದೆ ಆಗಮಿಸುತ್ತಿದ್ದುದು ಕಂಡುಬಂತು.






