ಕುಂಬಳೆ: ನಮ್ಮ ಮಕ್ಕಳು ಕಲಿತು ದೊಡ್ಡ ಉದ್ಯೋಗವನ್ನು ಪಡೆಯಬೇಕು ಎನ್ನುವುದು ಎಲ್ಲ ರಕ್ಷಕರು ಹಂಬಲಿಸುವ ವಿಚಾರ. ಆದರೆ ಅದಕ್ಕಾಗಿ ಸೂಕ್ತ ಅಡಿಪಾಯವನ್ನು ಹಾಕುವ ಮನಸ್ಸು ಇರಬೇಕು. ಸಾವಿರಾರು ರೂ.ಗಳನ್ನು ಖರ್ಚು ಮಾಡುವುದು, ಹೆಸರಾಂತ ಶಾಲೆಗೆ ಕಳುಹಿಸುವುದು, ಕೇಳಿದ್ದನ್ನು ತಕ್ಷಣ ಖರೀದಿಸಿಕೊಡುವುದು ಮೊದಲಾದ ಕ್ರಮಗಳು ಮಕ್ಕಳು ನಿಯಂತ್ರಣ ತಪ್ಪಿ ಹೋಗುವುದಕ್ಕೆ ಹೆಚ್ಚು ಸಾಧ್ಯತೆಯನ್ನುಂಟುಮಾಡುತ್ತದೆ ಎಂದು ಅಧ್ಯಾಪಕ, ವ್ಯಕ್ತಿವಿಕಸನ ತರಬೇತುದಾರ ಮೊಹಮ್ಮದ್ ಜಸೀಲ್ ಮೊಗ್ರಾಲ್ ಪುತ್ತೂರು ನುಡಿದರು.
ಪೇರಾಲು ಸರ್ಕಾರಿ ಕಿರಿಯ ಬುನಾದಿ ಶಾಲೆಯಲ್ಲಿ ರಕ್ಷಕರಿಗಾಗಿ ಸೋಮವಾರ ಆಯೋಜಿಸಲಾದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಕ್ಕಳ ಹೆತ್ತವರಿಗೆ ತರಗತಿ ನಡೆಸಿ ಅವರು ಮಾತನಾಡಿದರು.
ಮಕ್ಕಳ ಜೊತೆ ದಿನವೊಂದರಲ್ಲಿ ಕನಿಷ್ಠ ಒಂದು ಗಂಟೆಯಾದರೂ ಜೊತೆಗಿರಲು ಸಮಯ ಮೀಸಲಿಡುವುದು, ಅವರಿಗೆ ಸ್ವಾತಂತ್ರ್ಯ ಇದೆ ಎಂಬ ಪ್ರಜ್ಞೆ ಮೂಡುವಂತಹ ವಾತಾವರಣವನ್ನು ನಿರ್ಮಿಸಿಕೊಟ್ಟು ಅವರ ಚಲನವಲನಗಳನ್ನು ಸೂಕ್ಷ್ಮವಾಗಿ ಅವಲೋಕಿಸುವುದು ಮಾತೆಯರ ಕತ್ರ್ಯವ್ಯವಾಗಬೇಕು. ನಿತ್ಯವಿಧಿಗಳನ್ನು ನಿಯಮಿತವಾಗಿ ಮಾಡುವಲ್ಲಿ ಮತ್ತು ಅದು ಮುಂದೆ ಬೆಳೆದುಬರುವಲ್ಲಿ ಮಾತಾಪಿತರ ಜವಾಬ್ದಾರಿ ಹೆಚ್ಚು ಎಂದು ಅವರು ಹೇಳಿದರು.
ಅರ್ಧವಾರ್ಷಿಕ ಮೌಲ್ಯಮಾಪನದ ಬಳಿಕ ಮೊದಲ ಬಾರಿಗೆ ನಡೆದ ರಕ್ಷಕರ ಸಮಾವೇಶವನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮೊಹಮ್ಮದ್ ಬಿ.ಎ. ಪೇರಾಲು ಉದ್ಘಾಟಿಸಿದರು. ಉಪಾಧ್ಯಕ್ಷ ಮೊಯ್ದೀನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ಗುರುಮೂರ್ತಿ ಸ್ವಾಗತಿಸಿ, ಶಿಕ್ಷಕ ವಿನುಕುಮಾರ್ ಮಾಸ್ತರ್ ವಂದಿಸಿದರು. ಚಿತ್ರಕಲಾ ಟೀಚರ್ ಕಾರ್ಯಕ್ರಮ ನಿರೂಪಿಸಿದರು.




