ಕುಂಬಳೆ: ಅಂಗಡಿಮೊಗರು ಸಮೀಪದ ದೇಲಂಪಾಡಿ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಿ.17 ರಿಂದ ಆರಂಭಗೊಂಡಿದ್ದ ವಾರ್ಷಿಕ ಧನುಪೂಜಾ ಮಹೋತ್ಸವ ಮಂಗಳವಾರ ಸಂಪನ್ನಗೊಂಡಿತು. ಡಿ.17 ರಂದು ಬ್ರಹ್ಮಶ್ರೀದೇಲಂಪಾಡಿ ಬಾಲಕೃಷ್ಣ ತಂತ್ರಿವರ್ಯರು ಧನುಪೂಜಾ ಮಹೋತ್ಸವಕ್ಕೆ ಚಾಲನೆ ನೀಡಿದ್ದರು.
ಮಂಗಳವಾರ ಮಹೋತ್ಸವದ ಸಮಾರೋಪದ ಅಂಗವಾಗಿ ಮುಂಜಾನೆ ಖ್ಯಾತ ಗಾಯಕ ಸಾಯಿಮನೋಹರ್ ಮತ್ತು ಬಳಗ ಮಧೂರು ತಂಡದವರಿಂದ ಭಜನಾ ಸಂಕೀರ್ತನೆ ನಡೆಯಿತು. ಮುಂಜಾನೆಯ ಧನುಪೂಜೆ, ಪ್ರಸಾದ ವಿತರಣೆಯ ಬಳಿಕ ನಡೆದ ಸಮಾರೋಪ ಸಭೆಯಲ್ಲಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ಶ್ರೀನಾಥ್ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಮುಂದಾಳು, ಉದ್ಯಮಿ ಗಿರಿಧರ ಶೆಟ್ಟಿ ಮಂಗಳೂರು, ಪುತ್ತಿಗೆ ಗ್ರಾ.ಪಂ.ಉಪಾಧ್ಯಕ್ಷ ಪಿ.ಬಿ.ಮೊಹಮ್ಮದ್, ಸ್ಥಾಯೀ ಸಮಿತಿ ಅಧ್ಯಕ್ಷ ಚನಿಯ ಪಾಡಿ, ಸದಸ್ಯ ಎಂ.ಕೆ.ಆನಂದ, ಕೆಡೆಂಜಿ ಶ್ರೀಕ್ಷೇತ್ರದ ರಾಮ ಬದಿಯಡ್ಕ, ನಿವೃತ್ತ ಬ್ಯಾಂಕ್ ಅಧಿಕಾರಿ ಡಿ.ದಾಮೋದರ್ ಉಪಸ್ಥಿತರಿದ್ದು ಮಾತನಾಡಿ ಶುಭಹಾರೈಸಿದರು.
ಈ ಸಂದರ್ಭ ಜ.20 ರಿಂದ 22ರ ವರೆಗೆ ಶ್ರೀಕ್ಷೇತ್ರದಲ್ಲಿ ನಡೆಯಲಿರುವ ಶಿವರಾತ್ರಿ ಮಹೋತ್ಸವ ಮತ್ತು ಮಾ.1 ರಂದು ನಡೆಯಲಿರುವ 25ನೇ ವರ್ಷದ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆಯ ಆಮಂತ್ರಣ ಪತ್ರಿಕೆಯನ್ನು ಪ್ರೊ.ಎ.ಶ್ರೀನಾಥ್ ಬಿಡುಗಡೆಗೊಳಿಸಿದರು. ಧನುಪೂಜಾ ಉತ್ಸವದ ಸಂದರ್ಭ ವಿವಿಧ ವಲಯಗಳಲ್ಲಿ ಸಕ್ರಿಯರಾಗಿ ಸೇವೆಸಲ್ಲಿಸಿದ ಕಾರ್ಯಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು. ಕ್ಷೇತ್ರದ ಪ್ರಮುಖರಲ್ಲಿ ಓರ್ವರಾದ ಶಂಕರ ರೈ ಮಾಸ್ತರ್ ಎಂ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೇಶವ ಮಾಸ್ತರ್ ವಂದಿಸಿದರು. ರಾಜೇಂದ್ರ ರೈ ವಂದಿಸಿದರು. 600ಕ್ಕಿಂತಲೂ ಮಿಕ್ಕಿದ ಭಕ್ತರು ಪಾಲ್ಗೊಂಡಿದ್ದರು.






