ಕುಂಬಳೆ: ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯ ಸಭೆಯು ಶ್ರಾವಣ ಕೆರೆ ಘಟಕದ ಯಜ್ಞನಾರಾಯಣ ಭಟ್ ಇವರ ಮನೆಯಲ್ಲಿ ಭಾನುವಾರ ಜರಗಿತು.
ಶಂಖನಾದ, ಧ್ವಜಾರೋಹಣೆ, ಗುರುವಂದನೆಯೊಂದಿಗೆ ಆರಂಭಗೊಂಡಿತು. ವಲಯಾಧ್ಯಕ್ಷ ಅಮ್ಮಂಕಲ್ಲು ರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಗತ ಸಭೆಯ ವರದಿ, ಮಹಾ ಮಂಡಲ ಸುತ್ತೋಲೆಗಳನ್ನು ವಲಯದ ಕಾರ್ಯದರ್ಶಿ ಬೆಜಪ್ಪೆ ಸುಬ್ರಹ್ಮಣ್ಯ ಭಟ್ ಮಂಡಿಸಿದರು.
ಕೋಶಾಧಿಕಾರಿ ರಾಜಗೋಪಾಲ ಅಮ್ಮಂಕಲ್ಲು ಲೆಕ್ಕಪತ್ರ ಮಂಡಿಸಿದರು. ಪ್ರತಿ ಘಟಕದಲ್ಲಿ ದೀಪಕಾಣಿಕೆ ಹಾಗೂ ಬೆಳೆಸಮರ್ಪಣೆಯ ದಿನಾಂಕ ನಿಗದಿಮಾಡಲಾಯಿತು ಹಾಗೂ ಘಟಕ ಸಭೆಯನ್ನು ಇದೇ ಸಂದರ್ಭದಲ್ಲಿ ಜರಗಿಸಲು ತೀರ್ಮಾನಿಸಲಾಯಿತು.
ಘಟಕಾಧ್ಯಕ್ಷರಿಗೆ ಶ್ರೀ ಗುರುಗಳಳು ಅನುಗ್ರಹಪೂರ್ವಕ ನೀಡಿರುವ ರಾಯಸವನ್ನು ಸಭೆಯಲ್ಲಿ ವಿತರಿಸಲಾಯಿತು. ಜ. 26 ರಂದು ಪೆರಾಜೆ ಮಾಣಿಮಠದಲ್ಲಿ ಜರಗಲಿರುವ ವಾರ್ಷಿಕೋತ್ಸವ, ಸೂತ್ರಸಂಗಮ ಹಾಗೂ ಶ್ರೀ ಗುರುಗಳ ಮೊಕ್ಕಾಂ ಬಗ್ಗೆ ಸಭೆಗೆ ತಿಳಿಸಲಾಯತು. ಸೇವಾ ವಿಭಾಗದ ವತಿಯಿಂದ ಕಾರ್ಯಕರ್ತರಾಗಿ ಕೆಲಸದಲ್ಲಿ ಸಹಕರಿಸಲು ತೀರ್ಮಾನಿಸಲಾಯಿತು. ಮಾ.1 ರಂದು ಗೋಕರ್ಣದ ಅಶೋಕೆಯಲ್ಲಿ ಜರಗುವ ಸರ್ವಸೇವಕ ಸಮಾವೇಶದ ಕುರಿತು ಸಭೆಗೆ ತಿಳಿಸಲಾಯಿತು. ಜ. 21 ರಂದು ಶ್ರಾವಣಕೆರೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಮಠದಲ್ಲಿ ನಡೆಯಲಿರುವ ವಾರ್ಷಿಕೋತ್ಸವದ ಬಗ್ಗೆ ತಿಳಿಸಲಾಯಿತು. ಇತ್ತೀಚೆಗೆ ಬ್ರಹ್ಮೈಕ್ಯರಾದ ಪೇಜಾವರ ವಿಶ್ವೇಶತೀರ್ಥ ಶ್ರೀಪಾದಂಗಳವರಿಗೆ 13 ಬಾರಿ ರಾಮತಾರಕ ಮಂತ್ರ ಜಪಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಶಂಕರಿ ಅಮ್ಮ ಎಡಕ್ಕಾನ ಇವರಿಗೆ ಪಡಿತರ ಚೀಟಿ ಒದಗಿಸಲು ಸಹಾಯ ನೀಡಿದ ಶಂಕರ್ ರಾವ್ ಕಕ್ವೆ ಇವರಿಗೆ ಸಭೆ ಅಭಿನಂದನೆ ಸಲ್ಲಿಸಿತು. ವಿಷ್ಣುಗುಪ್ತ ವಿಶ್ವವಿದ್ಯಾಪೀಠ, ಮೂಲಮಠದ ಬಗ್ಗೆ ನಡೆಸಬೇಕಾದ ಅಭಿಯಾನದ ಬಗ್ಗೆ ಮಂಡಲ ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ ಮಾಹಿತಿ ನೀಡಿದರು. ರಾಮತಾರಕ ಜಪ, ಶಾಂತಿ ಮಂತ್ರ, ಶಂಖನಾದ ಧ್ವಜಾವರೋಹಣದೊಂದಿಗೆ ಸಭೆ ಮುಕ್ತಾಯಗೊಂಡಿತು.




