ಮಂಜೇಶ್ವರ: ಸ್ನೇಹಾಲಯಕ್ಕೆ ಮತ್ತೋರ್ವ ಹೊಸ ಅತಿಥಿ. ಊರು-ಕೇರಿ ಗೊತ್ತಿಲ್ಲದೆ ರಾಜರಸ್ತೆ ಬದಿಯಲ್ಲಿ ಸುತ್ತಾಡುತ್ತಿದ್ದ ಯುವಕನನ್ನು ಕಂಡ ನಾಗರಿಕರು ಮಾಹಿತಿ ನೀಡಿದ ಫಲವಾಗಿ ಆತ ಸ್ನೇಹಮನೆಯನ್ನು ಸೇರುವಂತಾಗಿದ್ದಾನೆ.
ಮಂಜೇಶ್ವರದ ತೂಮಿನಾಡು ಪ್ರದೇಶದಿಂದ ಹೆದ್ದಾರಿ ಬದಿಯಲ್ಲಿ ಏನೋ ಗೊಣಗುತ್ತಾ ಕೆಲವೊಮ್ಮೆ ಜೋರಾಗಿ ಚೀರಾಡುತ್ತಾ ಆತ ನಡೆಯುತ್ತಿದ್ದ. ತೂಮಿನಾಡು ಪ್ರದೇಶ ವಾಸಿಗಳು ಈತನ ಬಗ್ಗೆ ಸ್ನೇಹಾಲಯಕ್ಕೆ ಮಾಹಿತಿ ನೀಡಿದ್ದರು. ಶನಿವಾರ ಬ್ರದರ್ ಜೋಸೆಫ್ ಕ್ರಾಸ್ತಾ ನೇತೃತ್ವದ ಸ್ನೇಹಾಲಯ ತಂಡವು ತಲುಪಿ ಸುಮಾರು 35 ವರ್ಷ ಪ್ರಾಯವುಳ್ಳ ಆ ಯುವಕನನ್ನು ಕರೆ ತಂದಿದ್ದಾರೆ. ಆತನು ಮೂರು ಅಂಗಿಗಳನ್ನು ತೊಟ್ಟಿದ್ದ. ಸಾಲದ್ದಕ್ಕೆ ಒಂದೆರಡು ಶಾಲುಗಳನ್ನೂ ಹೆಗಲಿಗೇರಿಸಿದ್ದ. ಕೈಯ್ಯಲ್ಲಿದ್ದ ಪ್ಲಾಸ್ಟಿಕ್ ಚೀಲದಲ್ಲಿ ಕಲ್ಮಶಗಳನ್ನು ತುಂಬಿಸಿಕೊಂಡಿದ್ದ. ಸ್ನೇಹಮನೆಯಲ್ಲಿ ಪ್ರೀತಿಯ ಉಪಚಾರ ನೀಡಿ ಆತ್ಮೀಯವಾಗಿ ಮಾತನಾಡಿಸಿದಾಗ ತನ್ನ ಹೆಸರು ಹೈದರ್ ಅಂದಿದ್ದ. ಅದನ್ನೇ ಪುನರುಚ್ಚರಿಸುತ್ತಿದ್ದ. ಅಸ್ಪಷ್ಟ ಹಿಂದಿ ಮಾತನಾಡುತ್ತಿದ್ದ. ಆದರೆ, ಊರು, ಸಂಬಂಧಿಕರ ನೆನಪು ಹೈದರ್ ನ ಮನಸ್ಸಿನಿಂದ ಅಳಿದು ಹೋಗಿರುವುದು ದುರ್ದೈವವಾಗಿದೆ.
ಹೈದರ್‍ನನ್ನು ಇದೀಗ ಮಂಗಳೂರಿನ ಯೇನಪೋಯ ಆಸ್ಪತ್ರೆಯ ಮಾನಸಿಕ ರೋಗ ವಿಭಾಗದಲ್ಲಿ ದಾಖಲಿಸಲಾಗಿದೆ. ತಜÐó ಶುಶ್ರೂಷೆ ಬಳಿಕ ಸ್ನೇಹಾಲಯಕ್ಕೆ ಕರೆತಂದು ಆತ್ಮೀಯ ಉಪಚಾರ ನೀಡಿ, ಶುಶ್ರೂಷೆ ಮುಂದುವರಿಸಿ ಪೂರ್ಣ ಗುಣಮುಖನಾದ ಬಳಿಕ ಸಂಬಂಧಿಕರನ್ನು ಕಂಡು ಹುಡುಕಿ ಊರಿಗೆ ಬಿಡುವುದಾಗಿ ಜೋಸೆಫ್ ಕ್ರಾಸ್ತಾ ತಿಳಿಸಿದ್ದಾರೆ.




