ಬದಿಯಡ್ಕ: ಕೊಡುಗೈದಾನಿ ಕಿಳಿಂಗಾರು ಸಾಯಿರಾಂ ಗೋಪಾಲಕೃಷ್ಣ ಭಟ್ ಅವರು ಬಡಜನರಿಗೆ ಉಚಿತವಾಗಿ ನೀಡುವ 260 ನೇ ಮನೆಯ ಕೀಲಿಯ ಕೈ ಹಾಗೂ ಮಹಿಳೆಯರಿಗೆ ಸ್ವ ಉದ್ಯೋಗಕ್ಕಾಗಿ ನೀಡುವ ಹೊಲಿಗೆ ಯಂತ್ರಗಳನ್ನು ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಸೋಮವಾರ ಹಸ್ತಾಂತರಿಸಿದರು.
ಕಿಳಿಂಗಾರು ಸಾಯಿರಾಂ ನಿವಾಸದಲ್ಲಿ ಜರಗಿದ ಸಮಾರಂಭದಲ್ಲಿ ಅವರು ಮಾತನಾಡಿ ಬಡಜನರ ಜೀವನಕ್ಕೊಂದು ದಾರಿಯನ್ನು ಮಾಡಿಕೊಡುವುದರೊಂದಿಗೆ ಮನೆಯಿಲ್ಲದವರಿಗೆ ಮನೆಯನ್ನು ಕಟ್ಟಿಕೊಡುವ ದೊಡ್ಡ ಮನಸ್ಸು ಇವರದ್ದಾಗಿದೆ. ಇಂತಹ ಜನಪರವಾದ ಕಾರ್ಯಗಳನ್ನು ಮಾಡುವತ್ತ ರಾಜಕೀಯ ಪಕ್ಷಗಳೂ ಚಿಂತಿಸಬೇಕಾಗಿದೆ ಎಂದರು. ಮನೆಯ ಫಲಾನುಭವಿಗಳಾದ ಬೇಳದ ಅಪ್ಪಕುಂಞÂ-ಶಾರದಾ ದಂಪತಿಗಳು ಮನೆಯ ಕೀಲಿಕೈಯನ್ನು ಮತ್ತು ಸವಿತಾ ಕಿಳಿಂಗಾರು, ರಮ್ಲ, ಸುನಿತಾ, ವಸಂತಿ, ಮಾಲಿನಿ, ಅಂಜಲಿ, ಚಂದ್ರಿಕಾ ಹೊಲಿಗೆ ಯಂತ್ರಗಳನ್ನು ಪಡೆದುಕೊಂಡರು.
ಸಾಯಿರಾಂ ಗೋಪಾಲಕೃಷ್ಣ ಭಟ್ಟರ ಪುತ್ರ, ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ಗ್ರಾಮಪಂಚಾಯಿತಿ ರಸ್ತೆ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನಗಳನ್ನು ಒದಗಿಸಿಕೊಡಬೇಕೆಂದು ಸಂಸದರಲ್ಲಿ ವಿನಂತಿಸಿದರು. ಸಾಯಿರಾಂ ಗೋಪಾಲಕೃಷ್ಣ ಭಟ್, ಶಾರದಾ, ಕೆ.ಎನ್.ಶೀಲಾ ಕೃಷ್ಣಭಟ್, ಗ್ರಾಮಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ, ಸದಸ್ಯ ಡಿ.ಶಂಕರ, ಡಿ.ಕೃಷ್ಣ, ರವಿ ಮೆಣಸಿನಪಾರೆ, ಬದಿಯಡ್ಕ ಮಂಡಲ ಕಾಂಗ್ರೆಸ್ ಅಧ್ಯಕ್ಷ ನಾರಾಯಣ, ಪಿ.ಜಿ.ಚಂದ್ರಹಾಸ ರೈ, ಅಬ್ಬಾಸ್, ಆನಂದ ಉಪಸ್ಥಿತರಿದ್ದರು. ಕೆ.ಎನ್.ವೇಣುಗೋಪಾಲ ವಂದಿಸಿದರು. ಮಧುರಾ ಕೆ.ಎಸ್. ಪ್ರಾರ್ಥನೆ ಹಾಡಿದರು.



