ಶಿರಸಿ: ಯಕ್ಷಗಾನ ಕ್ಷೇತ್ರದ ಮಹಾನ್ ಸಾಧಕ, ಜೀವನವನ್ನೇ ಅದಕ್ಕಾಗಿ ಮುಡಿಪಾಗಿಟ್ಟ ಹೊಸ್ತೋಟ ಮಂಜುನಾಥ ಭಾಗವತ(80) ಇಂದು ನಿಧನರಾದರು. ಈ ಮೂಲಕ ಯಕ್ಷಗಾನ ಕ್ಷೇತ್ರದ ಹಿರಿಯ ತಲೆಮಾರಿನ ಕೊಂಡಿಯೊಂದು ಕಳಚುವ ಮೂಲಕ ಪರಂಪರೆಯೊಂದರ ಕಣ್ಮರೆ ನಿಡುಗಾಲ ಕಾಡಲಿದೆ.
ಶಿರಸಿಯ ವಾನಳ್ಳಿ ಸಮೀಪದ ಮೋತಿಗುಡ್ಡದ ಕುಟೀರದಲ್ಲಿ ಅವರು ಕೆಲವು ಸಮಯಗಳಿಂದ ನೆಲಸಿದ್ದರು. ಅನಾರೋಗ್ಯದ ಕಾರಣ ಇತ್ತೀಚೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆತ್ಮೀಯ ಕಲಾಪೋಷಕರ ಮನೆಯಲ್ಲಿ ವಾಸ್ತವ್ಯದಲ್ಲಿದ್ದರು.
ಕೆರೆಮನೆ ಶಿವರಾಮ ಹೆಗಡೆಯವರಿಂದ ಯಕ್ಷಲೋಕದ ಸರ್ವಾಂಗೀಣ ಮೂಲೆಗಳನ್ನು ಅಭ್ಯಸಿಸಿ ಕೆರೆಮನೆ ಮೇಳದಲ್ಲಿ ಕಲಾವಿದರಾಗಿ ಪಾತ್ರ ನಿರ್ವಹಿಸಿದರು. ಬಾಳೆಹದ್ದ ಕೃಷ್ಣ ಭಾಗವತ ಹಾಗೂ ಕೆರೆಮನೆ ಮಹಾಬಲ ಹೆಗಡೆಯವರಿಂದ ಮತ್ತಷ್ಟು ಕಲಿಕೆಯನ್ನು ಪಡೆದು ಭಾಗವತಿಕೆ, ನೃತ್ಯ, ಚೆಂಡೆ, ಮೃದಂಗ, ವೇಷ, ಅರ್ಥಗಾರಿಕೆಗಳಲ್ಲಿ ವಿಶೇಷ ಅನುಭವ, ತಜ್ಞತೆಗಳಿಸಿಕೊಂಡಿದ್ದರು.
ಆಧ್ಯಾತ್ಮದಲ್ಲಿ ವಿಶೇಷ ಆಸಕ್ತರಾದ ಭಾಗವತರು 1966ರಲ್ಲಿ ಮೈಸೂರು ರಾಮಕೃಷ್ಣ ಆಶ್ರಮದಲ್ಲಿ ಪರಿವ್ರಾಜಕತ್ವ ಸ್ವೀಕರಿಸಿದರು. 300ಕ್ಕಿಂತಲೂ ಹೆಚ್ಚಿನ ಯಕ್ಷಗಾನ ಪ್ರಸಂಗಗಳನ್ನು ರಚಿಸಿರುವ ಭಾಗವತರು ಯಕ್ಷ-ಆಧ್ಯಾತ್ಮ ವಿಶ್ವ ವಿದ್ಯಾನಿಲಯವಾಗಿದ್ದರು. ಅವಿವಾಹಿತರಾಗಿದ್ದ ಅವರು ಸಹಸ್ರ ಸಂಖ್ಯೆಯ ಯಕ್ಷಕಲಾಭಿಮಾನಿಗಳನ್ನು ಅಗಲಿದ್ದಾರೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿ, ಜಾನಪದ ಅಕಾಡೆಮಿ,ಯಕ್ಷಗಾನ ಅಕಾಡೆಮಿ, ಕರ್ನಾಟಕ ರಾಜ್ಯೋತ್ಸವ ಪುರಸ್ಕಾರಗಳೇ ಸಹಿತ ನೂರಾರು ಪ್ರಶಸ್ತಿಗಳೂ ಈ ಹಿರಿಯ ಜೀವಕ್ಕೆ ಸಂದಿವೆ.






