ಬದಿಯಡ್ಕ: ಕನ್ನಡ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಲೋಕಸೇವಾ ಆಯೋಗದ ಮಾರ್ಗದರ್ಶಿ ತರಬೇತಿಯನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳಿಗೆ ಬೇಕಾದ ಅನುಕೂಲವನ್ನು ನಾವು ಒದಗಿಸಿಕೊಟ್ಟಾಗ ಅವರು ಇನ್ನಷ್ಟು ಸಾಧನೆಯನ್ನು ಮಾಡಲು ಸಾಧ್ಯ ಎಂದು ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕೇಂದ್ರ ಸಮಿತಿಯ ಅಧ್ಯಕ್ಷ ರವೀಂದ್ರನಾಥ ಕೆ ಆರ್ ಹೇಳಿದರು.
ಅವರು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕುಂಬಳೆ ಉಪಜಿಲ್ಲಾ ಘಟಕವು ಪೆರಡಾಲ ನವಜೀವನ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಎಲ್ ಎಸ್ ಎಸ್, ಯು ಎಸ್ ಎಸ್ ಪರೀಕ್ಷಾ ಉಚಿತ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ಕುಂಬಳೆ ಉಪಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ಯಾಮಪ್ರಸಾದ್, ಡಾ.ಸತೀಶ ಪುಣಿಚಿತ್ತಾಯ, ಸವಿತಾ ಟೀಚರ್ ಉಪಸ್ಥಿತರಿದ್ದರು. ಪ್ರಭಾವತಿ ಕೆದಿಲಾಯ ಪುಂಡೂರು ಪ್ರಾರ್ಥಿಸಿದರು. ಸುರೇಖ ಟೀಚರ್ ಸ್ವಾಗತಿಸಿ, ಶರತ್ ಕುಮಾರ್ ವಂದಿಸಿದರು. ಪ್ರದೀಪ ಕುಮಾರ್ ಶೆಟ್ಟಿ ನಿರೂಪಿಸಿದರು. ತರಬೇತಿಯಲ್ಲಿ ಸುಮಾರು 270 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಬಿರದಲ್ಲಿ ಪರೀಕ್ಷಾ ವಿಷಯಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವಿವಿಧ ಶಾಲಾ ಅಧ್ಯಾಪಕರು ಸಹಕರಿಸಿದರು. ಒಂದು ದಿನ ಪರೀಕ್ಷಾ ತರಬೇತಿಯನ್ನೂ ಎರಡನೇ ದಿನ ಮಾದರಿ ಪರೀಕ್ಷೆಯನ್ನೂ ನಡೆಸಲಾಯಿತು. ಶಿಬಿರವು ಸಂಪೂರ್ಣ ಉಚಿತವಾಗಿತ್ತು. ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಭೋಜನವ್ಯವಸ್ಥೆಯನ್ನು ಮಾಡಲಾಗಿತ್ತು.




