HEALTH TIPS

ಸ್ವತಂತ್ರವಾಗಿ ಯೋಚಿಸಿ, ದೃಢ ನಿರ್ಧಾರವನ್ನು ಕೈಗೊಳ್ಳುವ ಗುಣ ವಿದ್ಯಾರ್ಥಿಗಳಲ್ಲಿರಬೇಕು-ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ವಸಂತೋತ್ಸವ ಕಾರ್ಯಕ್ರಮದಲ್ಲಿ ಡಾ. ರಾಧಾಕೃಷ್ಣ ಬೆಳ್ಳೂರು

     
       ಬದಿಯಡ್ಕ: ಊರಿನ ಸಂಸ್ಕøತಿ ರೂಪುಗೊಳ್ಳುವುದು ಅಲ್ಲಿನ ಶಿಕ್ಷಣಕೇಂದ್ರದ ಮೂಲಕವಾಗಿದ್ದು, ವಿದ್ಯಾರ್ಥಿಯ ಒಳಗೆ ಬೆಳಕು ಇದೆ ಎಂಬ ಅವರಿವನ್ನು ವಿದ್ಯಾರ್ಥಿಗೆ ಬೋಧಿಸುವುದೇ ನೈಜವಾದ  ವಿದ್ಯಾಭ್ಯಾಸವಾಗಿದೆ. ಸ್ವತಂತ್ರವಾಗಿ ಯೋಚಿಸುವ ಮನೋಸ್ಥಿತಿಯನ್ನು ಬೆಳೆಸಿಕೊಳ್ಳುವ ಗುಣವನ್ನು ವಿದ್ಯಾರ್ಥಿಗಳಲ್ಲಿ ಬಿತ್ತಿದಾಗ ಶಿಕ್ಷಣವ್ಯವಸ್ಥೆ ನೂರಕ್ಕೆ ನೂರರಷ್ಟು ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳುತ್ತದೆ ಎಂದು ಕಾಸರಗೋಡು ಸರಕಾರೀ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ರಾಧಾಕೃಷ್ಣ ಬೆಳ್ಳೂರು ಹೇಳಿದರು.
        ಶನಿವಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ವಸಂತೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಅಭ್ಯಾತರಾಗಿ ಅವರು ಮಾತನಾಡಿದರು. ವರ್ತಮಾನದಲ್ಲಿ ಅಕ್ಷರ ಮತ್ತು ಶಿಕ್ಷಣಕ್ಕಿರುವ ವ್ಯತ್ಯಾಸವನ್ನು ನಾವು ಕಂಡುಕೊಳ್ಳಬೇಕಾದ ಆವಶ್ಯಕತೆಯಿದೆ. ಆತ್ಮಜ್ಯೋತಿ ಎಂದರೆ ನಮ್ಮೊಳಗಿರುವ ಬೆಳಕು. ಆದರೆ ನಮ್ಮೊಳಗೆ ಒಂದು ಬೆಳಕು ಇದೆ ಅಂತ ತಿಳಿಯುವುದೇ ಶಿಕ್ಷಣದ ನಿಜವಾದ ಆರಂಭ. ಇದನ್ನು ತಿಳಿಯಬೇಕಿದ್ದರೆ ಮಕ್ಕಳಲ್ಲಿ ಯಾಕೆ ಎನ್ನುವ ಪ್ರಶ್ನೆಯನ್ನು ಮನಸ್ಸಿನಲ್ಲಿ ಮೂಡಿಸುವ ಪ್ರಕ್ರಿಯೇ ಆಗಬೇಕು. ಹಾಗಾದಾಗ ಮಾತ್ರ ವಿದ್ಯಾರ್ಥಿಯು ಕಲಿಕೆಯೆಡೆಗೆ ಸಾಗುತ್ತಾನೆ. ಆವಾಗ ಕಲಿಕೆಯು ಆಪ್ಯಾಯಮಾನವಾಗುತ್ತದೆ. ರಾಷ್ಟ್ರವನ್ನು ಕಟ್ಟಬೇಕಾದ ವಿದ್ಯಾರ್ಥಿಗಳಿಗೆ ಗಟ್ಟಿಯಾದ ದೇಹದೊಳಗೆ ಗಟ್ಟಿಯಾದ ಮನಸ್ಸಿರಬೇಕು. ಇಂತಹವರನ್ನು ರೂಪಿಸುವ ಜವಾಬ್ದಾರಿಯು ನಮ್ಮೆಲ್ಲರಿಗೂ ಇದೆ. ಅಂತಹ ಜವಾಬ್ದಾರಿಯುತ ಸ್ಥಾನದಲ್ಲಿ ನಾವಿದ್ದೇವೆ. ವಿದ್ಯಾರ್ಥಿಗಳ ಸರ್ವತೋಮುಖವಾದ, ಸ್ವತಂತ್ರವಾದ ಬೆಳವಣಿಗೆಗೆ ಬೇಕಾದ ಎಲ್ಲ ಅವಕಾಶಗಳನ್ನು ಇಲ್ಲಿ ದೊರಕಲ್ಪಡುತ್ತದೆ. ಇಲ್ಲಿಂದ ಹೊರಬರುತ್ತಿರುವ ವಿದ್ಯಾರ್ಥಿಗಳು ಬಲಶಾಲಿಗಳಾಗಿ ಹೊರಹೊಮ್ಮುತ್ತಿದ್ದಾರೆ ಎಂಬುದನ್ನು ಗಮನಿಸಿದ್ದೇನೆ ಎಂದರು.
        ಅಭ್ಯಾಗತರಾಗಿ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ ಮಾತನಾಡಿ ಮಕ್ಕಳಲ್ಲಿ ಹುದುಗಿರುವ ಬುದ್ಧಿಶಕ್ತಿಗಳನ್ನು ವಿಕಾಸಗೊಳಿಸುವ ಪೂರಕ ವಾತಾವರಣವನ್ನು ಶಿಕ್ಷಣ ಸಂಸ್ಥೆಗಳಲ್ಲಿ ಒದಗಿಸಿಕೊಡಬೇಕಾಗಿದೆ. ಗಣಿತ, ಭಾಷೆ, ಸಾಂಸ್ಕøತಿಕ ಇವೇ ಮೊದಲಾದ ಹಲವಾರು ಚಟುವಟಿಕೆಗಳನ್ನು ಈ ಶಾಲೆಯಲ್ಲಿ ನೀಡುತ್ತಿದ್ದಾರೆ. ಇದನ್ನು ಹತ್ತಿರದಿಂದ ಬಲ್ಲವನಿದ್ದೇನೆ. ಓದು ಬರಹದೊಂದಿಗೆ ವಿವಿಧ ರೀತಿಯ ಚಟುವಟಿಕೆಗಳು ಸೇರಿಕೊಂಡಾಗ ವಿದ್ಯಾರ್ಥಿಯ ಪರಿಪೂರ್ಣ ವಿಕಾಸವನ್ನು ಕಾಣಬಹುದು. ಹಾಗಾದಾಗ ಅಂತಹ ಶಿಕ್ಷಣ ಸಂಸ್ಥೆಗಳನ್ನು ಉಳಿಸಿಬೆಳೆಸುವಲ್ಲಿ ಸಮಾಜವು ಸ್ವಯಂಪ್ರೇರಿತವಾಗಿ ಕೈಜೋಡಿಸುತ್ತದೆ. ಶಾಲಾ ಸಂಚಾಲಕ ಜಯಪ್ರಕಾಶ ಪಜಿಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ವರದಿಯನ್ನು ವಾಚಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗಣೇಶ್ ಪೈ ಬದಿಯಡ್ಕ, ಮಾತೃಸಮಿತಿ ಅಧ್ಯಕ್ಷೆ ಪ್ರಮೀಳ ಗೋಸಾಡ ಶುಭಹಾರೈಸಿದರು. ಹಿರಿಯ ನಿವೃತ್ತ ಅಧ್ಯಾಪಕ ಕೃಷ್ಣಯ್ಯ ಹೆಬ್ಬಾರ್, ಡಾ.ಬೇ.ಸೀ.ಗೋಪಾಲಕೃಷ್ಣ, ಮಕ್ಕಳ ಪಾಲಕರು, ಶಾಲಾ ಹಿತೈಶಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
      ಇದೇ ಸಂದರ್ಭದಲ್ಲಿ ಬೇರ್ಕಡವು ದಿ. ಸೀತಾರಾಮ ಭಟ್ಟರ ಸ್ಮರಣಾರ್ಥ ಕೊಡಮಾಡುವ ದತ್ತಿನಿಧಿ ಸ್ವರ್ಣಾಂಕುರವನ್ನು ಅಭಿರಾಮ ಕಶ್ಯಪ್‍ಗೆ ನೀಡಲಾಯಿತು. ಪ್ರತೀ ತರಗತಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಗ್ರೇಸರ ಪ್ರಮಾಣಪತ್ರವನ್ನು ನೀಡಲಾಯಿತು. ಕಳೆದ ಸಾಲಿನ ಹತ್ತನೇ ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲಿ ಎಪ್ಲಸ್ ಪಡೆದ ವಿದ್ಯಾರ್ಥಿಗಳನ್ನು ಸಭೆಗೆ ಪರಿಚಯಿಸಲಾಯಿತು. ದಿ.ಕೃಷ್ಣ ಪೈ ಸ್ಮರಣಾರ್ಥ ಅವರ ಪುತ್ರ ಗಣೇಶ್ ಪೈ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯ ಕುಳಮರ್ವ ಶ್ಯಾಮಭಟ್ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನಿಧಿಯನ್ನು ವಿತರಿಸಲಾಯಿತು. ಶಾಲಾ ವಿದ್ಯಾರ್ಥಿ ನಾಯಕ ಸಾತ್ವಿಕ್ ಚುಳ್ಳಿಕ್ಕಾನ ಸ್ವಾಗತಿಸಿ, ಉಪನಾಯಕಿ ಅಪರ್ಣಾ ಪಟ್ಟಾಜೆ ವಂದಿಸಿದರು. ಸಿಂಧುಶ್ರೀ ಕುಳೂರು ನಿರೂಪಿಸಿದರು. ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಂದ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುವ 32 ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿದವು. ಯಾವುದೇ ಧ್ವನಿಸುರುಳಿಯನ್ನು ಬಳಸದೆ ವಿದ್ಯಾರ್ಥಿಗಳೇ ಹಿನ್ನೆಲೆ ಗಾಯನದಲ್ಲಿ ಸಕ್ರಿಯತೆಯಿಂದ ಪಾಲ್ಗೊಂಡಿದ್ದರು.
       ಅಭಿಮತ:
     ಬಹುಮುಖ ಬುದ್ದಿಶಕ್ತಿಗೆ ಪೂರಕವಾದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಇಲ್ಲಿಯ ಮಕ್ಕಳು ನೀಡುತ್ತಿರುವುದು ಶ್ಲಾಘನೀಯ. ಮಗುವಿನಲ್ಲಿ ವಿವಿಧ ಬುದ್ಧಿಶಕ್ತಿಗಳ ವಿಕಾಸ ಕೇವಲ ಯಕ್ಷಗಾನವೊಂದರಿಂದಲೇ ಸಾಧ್ಯವಿದೆ. ಬಣ್ಣ ಹಚ್ಚುವಿಕೆ, ಮಾತುಗಾರಿಕೆ, ಕುಣಿತ ಮೊದಲಾದವುಗಳು ಪೂರಕವಾಗಿದೆ. ಈ ಶಾಲೆಯ ವಿದ್ಯಾರ್ಥಿನಿಯೋರ್ವೆ ಯುಎಸ್‍ಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ `ಗಿಫ್ಟೆಡ್ ಚೈಲ್ಡ್' ಎಂಬ ಹೆಗ್ಗಳಿಕೆಯನ್ನು ಗಿಟ್ಟಿಸಿರುವುದು ನಿಜವಾಗಿಯೂ ಶ್ಲಾಘನೀಯ.
- ಯತೀಶ್ ಕುಮಾರ್ ರೈ, ಉಪಜಿಲ್ಲಾ ವಿದ್ಯಾಧಿಕಾರಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries