ಬದಿಯಡ್ಕ: ಯಕ್ಷಗಾನ ಬೊಂಬೆಯಾಟ ಕಲೆಯನ್ನು ಉಳಿಸಿ ಬೆಳೆಸುವ ಉದ್ದೇಶದೊಂದಿಗೆ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ ಕಾಸರಗೋಡು, ಹಮ್ಮಿಕೊಂಡಿರುವ ಬೊಂಬೆ ಚಿತ್ತ ಶಾಲೆಯತ್ತ ಕಾರ್ಯಕ್ರಮವು ಏತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆಯಿತು.
ದೇಶ ವಿದೇಶಗಳಲ್ಲಿ ಬೊಂಬೆಯಾಟ ಪ್ರದರ್ಶನ ನೀಡಿ ಜನ ಮೆಚ್ಚುಗೆ ಗಳಿಸಿದ ಕಾಸರಗೋಡಿನ ಪಿಲಿಕುಂಜೆಯ ಯಕ್ಷ ಪುತ್ಥಳಿ ಬೊಂಬೆ ಮನೆಯ ಕೆ. ವಿ. ರಮೇಶ್ ಮತ್ತು ಬಳಗದವರು ನರಕಾಸುರ ವಧೆ ಎಂಬ ಕಥಾ ಭಾಗವನ್ನು ಪ್ರದರ್ಶಿಸಿದರು. ಮಕ್ಕಳು ಬೊಂಬೆಗಳ ಕುಣಿತವನ್ನು ನೋಡಿ ಖುಷಿಪಟ್ಟರು. ಇದರೊಂದಿಗೆ ಬೊಂಬೆಯಾಟದ ಪ್ರಾತ್ಯಕ್ಷಿಕೆಯನ್ನು ನೀಡಿ ಮಕ್ಕಳಿಗೆ ಬೊಂಬೆಗಳ ಕುಣಿತದ ಹಿಂದಿನ ಕೈ ಚಳಕವನ್ನು ತೋರಿಸಿ ಕೊಟ್ಟರು.
ಇದಕ್ಕೆ ಮೊದಲು ನಡೆದ ಸಭೆಯಲ್ಲಿ ಶಾಲಾ ವ್ಯವಸ್ಥಾಪಕ ವೈ. ಶ್ರೀಧರ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ನಮ್ಮ ನಾಡಿನ ಕಲೆಗಳ ಉಳಿವಿಗೆ ನಡೆಸುವ ಇಂತಹ ಕಾರ್ಯಕ್ರಮಗಳಿಗೆ ಅಗತ್ಯ ಪೆÇ್ರೀತ್ಸಾಹ ನೀಡಬೇಕೆಂದು ಹೇಳಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸುಶೀಲಾ ವಿ. ಅಧ್ಯಕ್ಷತೆ ವಹಿಸಿ ಮಾತನಾಡಿ ಶಾಲಾ ಮಕ್ಕಳಿಗೆ ಅಪರಿಚಿತವಾದ ಬೊಂಬೆಯಾಟ ಪ್ರದರ್ಶನ ನೀಡುತ್ತಿರುವುದು ಅಭಿನಂದನೀಯ ಎಂದು ಹೇಳಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕಿಶೋರ್ ರೈ ಕುಂಡಾಪು, ಮಾತೃ ಸಂಘದ ಅಧ್ಯಕ್ಷೆ ಆಶಾ ಓಡಂಗಲ್ಲು, ಎಸ್‍ಎಸ್‍ಜಿ ಅಧ್ಯಕ್ಷ ಗಣಪತಿ ಭಟ್, ಚಂದ್ರಶೇಖರ ಏತಡ್ಕ ಉಪಸ್ಧಿತರಿದ್ದು, ಬೊಂಬೆ ಚಿತ್ತ ಶಾಲೆಯತ್ತ ಕಾರ್ಯಕ್ರಮದ ರೂವಾರಿ ರಮೇಶ್ ಅವರನ್ನು ಶಾಲು ಹೊದೆಸಿ, ಹಣ್ಣು ಹಂಪಲು ನೀಡಿ ಗೌರವಿಸಲಾಯಿತು. ಅಧ್ಯಾಪಕ ರಾಜಾರಾಮ ಕೆ. ವಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಪುಟಾಣಿಗಳು, ರಕ್ಷಕರು, ಅಧ್ಯಾಪಕರು, ಊರ ಕಲಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕೆ. ವಿ. ರಮೇಶ್ ಅವರ ನಿರ್ಮಾಣ ಹಂತದಲ್ಲಿ ಇರುವ ಬೊಂಬೆ ಮ್ಯೂಸಿಯಂಗೆ ದೇಣಿಗೆ ನೀಡಿ ಸಹಕರಿಸಿದರು.




