ಮಂಜೇಶ್ವರ: ಅಮೂರ್ತ ಭಾವನೆಗಳನ್ನು ಪೋಣಿಸಿ ಭಾಷೆಯ ಮೂಲಕ ಮೂರ್ತ ಸ್ವರೂಪ ಪಡೆಯುವ ಕಾವ್ಯ ಕವಿ ಮತ್ತು ಓದುಗನಿಗೆ ಆನಂದವನ್ನು ಉಂಟುಮಾಡುತ್ತದೆ. ಕಥೆ, ಕವನಗಳು ಸಮಾಜವನ್ನು ಸತ್ಪಥದತ್ತ ಕೊಂಡೊಯ್ಯುವ ಶಕ್ತಿಹೊಂದಿದ್ದು, ನೋವು, ನಲಿವು, ವಿಮರ್ಶೆಗಳೇ ಮೊದಲಾದ ಭಾವ ತರಂಗಗಳನ್ನು ಸೃಷ್ಟಿಸುತ್ತದೆ ಎಂದು ಕಾಸರಗೋಡು ಸರ್ಕಾರಿ ಕಾಲೇಜಿನ ನಿವೃತ್ತ ಸಹ ಪ್ರಾಧ್ಯಾಪಕಿ ಡಾ.ಯು.ಮಹೇಶ್ವರಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಲಕ್ಷ್ಮೀ ಕೆ. ಅವರ ಚೊಚ್ಚಲ ಕವನ ಸಂಕಲನ ಮರುಭೂಮಿಯ ಮಳೆ ಹನಿಗಳು ಕೃತಿಯನ್ನು ಭಾನುವಾರ ಮಂಜೇಶ್ವರ ಹೊಸಬೆಟ್ಟಿನ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡಿನ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕವಿತೆಯ ಸೃಷ್ಟಿ ಏಕಾಂತದಲ್ಲಿ ಉಮಠಗುತ್ತದೆ. ಅದರ ಗಾಢ ಓದು ಕೂಡಾ ಏಕಾಂತದಲ್ಲಿ ನೂರಾರು ಅರ್ಥ ಸೃಜಿಸುವಿಕೆಗೆ ಕಾರಣವಾಗುತ್ತದೆ. ಜೀವ-ಭಾವದ ನಂಟು ಕವಿತೆಯ ಮೂಲ ದ್ರವ್ಯವಾಗಿದ್ದು, ಮಿಡಿಯುವ ಮನಸ್ಸು ಪ್ರಧಾನವಾಗಿರುತ್ತದೆ ಎಂದು ಅವರು ತಿಳಿಸಿದರು. ಭಾವ, ಕಲ್ಪನೆಗಳ ಸೊಗಸು ಮೇಳೈಸಿ ಭಾಷೆಯ ಮೂಲಕ ಸೃಷ್ಟಿಸಲ್ಪಡುವ ಕಾವ್ಯ ಕಾಲಘಟ್ಟದ ಪ್ರತೀಕವಾಗಿ ಭಾಷೆಯ ಬೆರಗಾಗಿ ಕಾವ್ಯಾಸಕ್ತರನ್ನು ಮುದಗೊಳಿಸುತ್ತದೆ ಎಂದು ಈಸಂದರ್ಭ ತಿಳಿಸಿದರು.
ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಮಾತನಾಡಿ, ಕನ್ನಡ ಸಾಹಿತ್ಯದ ನವ್ಯ ಕಾಲಘಟ್ಟದಲ್ಲಿ ಭಾವನೆಗಳಿಗೆ ಒಂದಷ್ಟು ಕೊರತೆ ಕಾಡಿತ್ತು. ಆದರೆ ಇಂದು ಮತ್ತೆ ಭಾವಸ್ಪುರಣತೆಯ ಸೃಷ್ಟಿಗಳಾಗುತ್ತಿರುವುದು ಕಾವ್ಯಾಸಕ್ತರನ್ನು ಸೆಳೆದಿದೆ ಎಂದರು. ಅಧ್ಯಯನ, ಬದ್ದತೆ, ಸಿದ್ದತೆಗಳಿಂದ ಸತ್ವ-ತತ್ವಯುತ ಕಾವ್ಯ ವಸ್ತು-ಅರ್ಥ ವಿಸ್ತಾರತೆಗಳಿಂದ ಬಹಿರಂಗದ ಶಿಲ್ಪದಂತೆ ಕಂಡರೂ ಅಂತರಂಗದಲ್ಲಿ ನೂರಾರು ಭಾವನೆಗಳ ಮಹಾನ್ ಶಕ್ತಿಯಾಗಿ ನಿತ್ಯ ಕಾಡುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ರಾಧಾಕೃಷ್ಣ ಬೆಳ್ಳೂರು ಅವರು ಮಾತನಾಡಿ, ಕಾಸರಗೋಡಿನ ಕನ್ನಡ ಭಾಷೆ, ಸಂಸ್ಕøತಿ ಸಂವರ್ಧನೆಯಲ್ಲಿ ಸಾಹಿತ್ಯಗಳ ಪಾತ್ರ ಮಹತ್ತರವಾದುದು. ಭಾಷೆಯೊಂದು ಉಳಿದು ಬೆಳೆಯಲು ಭಾಷೆಯ ಬಳಸುವ ಜನರು, ಸಾಹಿತ್ಯ ಮತ್ತು ಅಧ್ಯಯನ-ಅಧ್ಯಾಪನಗಳ ಕೊಡುಗೆಗಳು ಮಹತ್ವವಾದುದು ಎಂದರು. ಗಡಿನಾಡು ಕಾಸರಗೋಡಿನ ಕನ್ನಡ ಅಸ್ಮಿತೆಯ ಶಿಖರಗಳಾಗಿ ನೂರಾರು ಸಾಹಿತಿಗಳು, ಸಾಹಿತ್ಯ ಕೃತಿಗಳು ಮೇರು ಶಿಖರಗಳಾಗಿ ಗರಿಮೆಯೊದಗಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಕೃತಿಕರ್ತೆಗೆ ಶುಭಹಾರೈಸಿದರು.
ಕೃತಿಕರ್ತೆ ಲಕ್ಷ್ಮೀ ಕೆ.ಮಾತನಾಡಿ ಸಾಹಿತ್ಯ ಆಸಕ್ತಿ, ಕೃತಿ ಮೂಡಿಬಂದ ಬಗೆಗಳ ಬಗ್ಗೆ ತಿಳಿಸಿದರು. ಕಾಸರಗೋಡು ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಶ್ರೀಧರ ಏತಡ್ಕ ಕೃತಿಪರಿಚಯ ನೀಡಿ ಮಾತನಾಡಿದರು. ಗೋವಿಂದ ಪೈ ಸ್ಮಾರಕ ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪಿ.ಎಂ.ಸಲೀಂ, ಆಂಗ್ಲ ವಿಭಾಗದ ಸಹ ಪ್ರಾಧ್ಯಾಪಕಿ ಎಂ.ಮೃದುಲಾ, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಕಾರ್ಯದರ್ಶಿ ಶ್ರೀಕಾಂತ್ ನೆಟ್ಟಣಿಗೆ, ನಾಯ್ಕಾಪು ಶ್ರೀಶಾಸ್ತಾ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ಸತೀಶ್ ನಾಯ್ಕಾಪು, ನಿವೃತ್ತ ಪ್ರಾಧ್ಯಾಪಕ ಪದ್ಮನಾಭ ಪೂಜಾರಿ ಉಪಸ್ಥಿತರಿದ್ದು ಶುಭಹಾರೈಸಿದರು. ಮಂಜೇಶ್ವರ ಕಾಲೇಜಿನ ಪದವಿ ವಿದ್ಯಾರ್ಥಿಗಳಾದ ಉದಯ ಹಾಗೂ ರಕ್ಷಿತಾ ಕೆ., ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ ಲಲಿತಾಲಕ್ಷ್ಮೀ ಕುಳಮರ್ವ, ನಾಟ್ಯನಿಲಯಂ ಬಾಲಕೃಷ್ಣ ಮಾಸ್ತರ್ ಮಂಜೇಶ್ವರ ಮಾತನಾಡಿದರು. ಮಹೇಶ್ ರಾಜ್ ಉಪಸ್ಥಿತರಿದ್ದರು. ಮಂಜೇಶ್ವರ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶಿವಶಂಕರ ಪಿ.ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಧರ್ಮತ್ತಡ್ಕ ಶಾಲಾ ಶಿಕ್ಷಕ ಪ್ರಶಾಂತ್ ಹೊಳ್ಳ ಎನ್. ವಂದಿಸಿದರು.





