ತಿರುವನಂತಪುರ: ಕಳೆದ ಕೆಲವು ತಿಂಗಳಿಂದ ನೆನೆಗುದಿಗೆ ಬಿದ್ದಿರುವ ಬಿಜೆಪಿ ಕೇರಳ ರಾಜ್ಯ ಸಮಿತಿಗೆ ನೂತನ ಅಧ್ಯಕ್ಷರ ಆಯ್ಕೆ ಕಾಲ ಸನ್ನಿಹಿತವಾಗಿದೆ. ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ, ಹೋರಾಟಗಳ ಮೂಲಕ ಜನಮನ್ನಣೆಗೆ ಕಾರಣರಾಗಿರುವ ಕೆ. ಸುರೇಂದ್ರನ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತಗೊಂಡಿದೆ. ಈ ಬಗ್ಗೆ ಅಧಿಕೃತ ಘೋಷಣೆ ಜನವರಿ 10ರಂದು ನಡೆಯಲಿದೆ.
ಎರ್ನಾಕುಳಂನಲ್ಲಿ ಸೋಮವಾರ ಬಿಜೆಪಿ ಮುಖಂಡರ ಸಭೆಯ ನಂತರ ರಾಜ್ಯ ಸಮಿತಿ ಅಧ್ಯಕ್ಷರಾಗುವವರ ಹೆಸರನ್ನು ಕೇಂದ್ರ ಸಮಿತಿಗೆ ಕಳುಹಿಸಿಕೊಡಲಾಗಿದೆ. ಕಾಸರಗೋಡು ಜಿಲ್ಲಾ ಸಮಿತಿಗೆ ಹಾಲಿ ಅಧ್ಯಕ್ಷ ವಕೀಲ ಕೆ.ಶ್ರೀಕಾಂತ್ ಅವರನ್ನು ನೇಮಿಸಲಾಗಿದೆ. ಕಣ್ಣೂರಿನಲ್ಲಿ ಭಾನುವಾರ ನಡೆದ ಬಿಜೆಪಿ ರಾಜ್ಯ ಚುನಾವಣಾ ಸಮಿತಿ ಆಯ್ಕೆ ಮಾಡಿದೆ. ಕೇರಳದ ಇತರ ಜಿಲ್ಲೆಗಳ ಅಧ್ಯಕ್ಷರ ನೇಮಕಾತಿ ಜ.7ರಂದು ನಡೆಯಲಿದೆ. ಕಾಸರಗೋಡು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕೆ.ಶ್ರೀಕಾಂತ್ ಅಲ್ಲದೆ ಇತರ ಇಬ್ಬರ ಹೆಸರೂ ಪರಿಗಣನೆಗೆ ಬಂದಿದ್ದು, ಸೌಹಾರ್ದ ಮಾತುಕತೆ ನಂತರ ಇಬ್ಬರು ಹಿಂದೆ ಸರಿದಿದ್ದರು. ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಲು 52ಮಂದಿ ಇಲೆಕ್ಟೋರಲ್ ಸಮಿತಿ ಕಣ್ಣೂರಿಗೆ ಆಗಮಿಸಿತ್ತು. ರಾಜ್ಯ ಸಮಿತಿ ಅಧ್ಯಕ್ಷ ಹಾಗೂ 14ಜಿಲ್ಲೆಗಳ ಅಧ್ಯಕ್ಷರ ಅಧಿಕೃತ ಘೋಷಣೆ ಜನವರಿ 10ರಂದು ನಡೆಯಲಿರುವುದಾಗಿ ಬಿಜೆಪಿ ಪ್ರಕಟಣೆ ತಿಳಿಸಿದೆ.





