ಕುಂಬಳೆ: ರಾಜ್ಯದ ಸಾರ್ವಜನಿಕ ಆರೋಗ್ಯವಲಯದ ಎಲ್ಲ ವಿಭಾಗವೂ ಜನತೆಯ ಸೊತ್ತಾಗಿ ಪರಿಣಮಿಸಿದೆ. ಈ ರಂಗದ ಅಭಿವೃದ್ಧಿಯಲ್ಲಿ ರಾಜ್ಯ ಸರ್ಕಾರ ವಹಿಸಿರುವ ಮುತುವರ್ಜಿಯ ಪರಿಣಾಮ ಜನಪರ ಫಲಿತಾಂಶ ಲಭಿಸಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಭಿಪ್ರಾಯಪಟ್ಟರು.
ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆ ನೇತೃತ್ವದಲ್ಲಿ ಕುಂಬಳೆಯಲ್ಲಿ ನಿರ್ಮಿಸಲಾದ ಕುಂಬಳೆ ಸಹಕಾರಿ ಆಸ್ಪತ್ರೆಯ ನೂತನ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಆರೋಗ್ಯ ಕೇಂದ್ರಗಳನ್ನು ಎಲ್ಲ ವಲಯದ ಜನತೆಯ ಆಸರೆ ತಾಣಗಳಾಗಿ ಮಾರ್ಪಡಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ. ಈ ಸಾಧನೆಯನ್ನು ಗಮನಿಸಿ ಕೇಂದ್ರ ಸರ್ಕಾರ ನೀತಿ ಆಯೋಗದ ಪಟ್ಟಿಯಲ್ಲಿ ರಾಜ್ಯದ ಆರೋಗ್ಯ ವಲಯಕ್ಕೆ ಪ್ರಥಮ ಸ್ಥಾನ ಒದಗಿಸಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಆರೋಗ್ಯಗಳಂತೆಯೇ ಖಾಸಗಿ ಆರೋಗ್ಯ ಸಂಸ್ಥೆಗಳ ಕೊಡುಗೆಯೂ ಅನನ್ಯವಾಗಿದೆ. ಆರೋಗ್ಯ ವಲಯವನ್ನು ಇನ್ನಷ್ಟು ಸದೃಡಗೊಳಿಸುವ ಉದ್ದೇಶದಿಂದ ಸಹಕಾರಿ-ಖಾಸಗಿ ವಲಯಗಳ ಇನ್ನಷ್ಟು ಬೆಂಬಲ ಪಡೆಯಲಾಗುವುದು ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕುಟುಂಬ ಆರೋಗ್ಯ ಕೇಂದ್ರಗಳಾಗಿಸುವ ಮೂಲಕ ಬಡಜನತೆಗೆ ಅತ್ಯುತ್ತಮ ಚಿಕಿತ್ಸೆ ಒದಗಿಸಲು ಸಾಧ್ಯವಾಗುತ್ತಿದೆ. ಇದು ರಾಜ್ಯದ ಆರೋಗ್ಯ ವಲಯಕ್ಕೆ ನೀಡುತ್ತಿರುವ ಕೊಡುಗೆ ಅಪಾರವಾದುದು ಎಂದು ಮುಖ್ಯಮಂತ್ರಿ ತಿಳಿಸಿದರು.
ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಮಾಜಿ ಸಂಸದ ಪಿ.ಕರುಣಾಕರನ್, ಶಾಸಕರಾದ ಎಂ.ಸಿ.ಖಮರುದ್ದೀನ್, ಎನ್.ಎ.ನೆಲ್ಲಿಕುನ್ನು, ಕೆ.ಕುಂಞರಾಮನ್, ಜಿಲ್ಲಾ ಪಂಚಾಯತಿ ಅಧ್ಯಕ್ಷ ಎ.ಜಿ.ಸಿ.ಬಶೀರ್, ಮಾಜಿ ಸಚಿವ ಸಿ.ಟಿ.ಅಹಮ್ಮದಾಲಿ, ಮಾಜಿ ಶಾಸಕರಾದ ಸಿ.ಎಚ್.ಕುಂಞಂಬು, ಪಿ.ರಾಘವನ್, ಕೆ.ಕುಂಞರಾಮನ್, ಕೆ.ಪಿ.ಸತೀಶ್ಚಂದ್ರನ್, ಕೆ.ವಿ.ಕುಂಞರಾಮನ್, ಸಹಕಾರಿ ಇಲಾಖೆ ಜೊತೆ ರೆಜಿಸ್ಟಾರ್ ವಿ.ಮಹಮ್ಮದ್ ನೌಷಾ, ಬ್ಲಾಕ್ ಪಂಚಾಯತಿ ಅಧ್ಯಕ್ಷರುಗಳಾದ ಎ.ಕೆ.ಎಂ.ಅಶ್ರಫ್, ಓಮನಾ ರಾಮಚಂದ್ರನ್, ಕುಂಬಳೆ ಗ್ರಾಮಪಂಚಾಯತಿ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್., ಪುತ್ತಿಗೆ ಗ್ರಾಮಪಂಚಾಯತಿ ಅಧ್ಯಕ್ಷೆ ಅರುಣ ಜೆ, ಸಹಕಾರಿ ಆಸ್ಪತ್ರೆ ಸೊಸೈಟಿ ಅಧ್ಯಕ್ಷ ಎ.ಚಂದ್ರಶೇಖರ, ಪದಾಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಮೊದಲಾದವರು ಉಪಸ್ಥಿತರಿದ್ದರು.
ಮತ್ತಷ್ಟು:
ಜತೆಯ ನಿರೀಕ್ಷೆಯನ್ನೂ ಮೀರಿ ಬೆಳೆದ ಸಹಕಾರಿ ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟನೆ:
ಜನತೆಯ ನಿರೀಕ್ಷೆಯ ಎತ್ತರವನ್ನೂ ದಾಟಿ ಬೆಳೆದು ನಿಂತ ಕುಂಬಳೆ ಸಹಕಾರಿ ಆಸ್ಪತ್ರೆಯ ನೂತನ ಕಟ್ಟಡ ಮಂಗಳವಾರ ಉದ್ಘಾಟನೆಗೊಂಡಿತು. ಕುಂಬಳೆ ಪೇಟೆಯ ಕುಂಬಳೆ -ಮುಳ್ಳೇರಿಯ ರಸ್ತೆಯ ಸನಿಹ ನೂತನ ಕಟ್ಟಡ ನೆಲೆನಿಂತಿದ್ದು, ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆ ಸಂಘ ಖರೀದಿಸಿದ 58.5 ಸೆಂಟ್ಸ್ ಜಾಗದಲ್ಲಿ ಹತ್ತು ಕೋಟಿ ರೂ. ವೆಚ್ಚದಲ್ಲಿ ನೂತನ ಸಹಕಾರ ಆಸ್ಪತ್ರೆಯ ಕಟ್ಟಡ ನಿರ್ಮಿಸಲಾಗಿದೆ. ನೂತನ ಕಟ್ಟಡದಲ್ಲಿ ಮೂರು ಜನರಲ್ ವಾರ್ಡ್ ಗಳು, ಮಹಿಳೆಯರಿಗೆ, ಪುರುಷರಿಗೆ,ಮಕ್ಕಳಿಗೆ ಪ್ರತ್ಯೇಕ ವಾರ್ಡ್ ಗಳಿವೆ. 4 ಅಂತಸ್ತಿನ ಕಟ್ಟಡದಲ್ಲಿ ಯಾರ್ಂಪ್, ಲಿಫ್ಟ್ ಸೌಲಭ್ಯಗಳಿವೆ. ಐ.ಸಿ.ಯು, ಎನ್.ಐ.ಸಿಯು., ಶಸ್ತ್ರಚಿಕಿತ್ಸೆ ಕೊಠಡಿ, ಫಾರ್ಮಸಿ, ಪ್ರಯೋಗಾಲಯ, ಸ್ಕ್ಯಾನಿಂಗ್, 24 ತಾಸುಗಳೂ ಚಟುವಟಿಕೆ ನಡೆಸುವ ತುರ್ತು ವಿಭಾಗ ಇತ್ಯಾದಿಗಳೂ ಇವೆ. ತ್ಯಾಜ್ಯ ಸಮಸ್ಕರಣೆ, ಬಟ್ಟೆ ಒಗೆಯುವುದಕ್ಕೆ ಇತ್ಯಾದಿಗಳಿಗೆ ಪ್ರತ್ಯೇಕ ಯಂತ್ರೋಪಕರಣಗಳಿವೆ.
1988ರಲ್ಲಿ ನೋಂದಣಿ ನಡೆಸಿರುವ ಜಿಲ್ಲಾ ಆಸ್ಪತ್ರೆ ಸಹಕಾರಿ ಸಂಘ ವ್ಯಾಪ್ತಿಯಲ್ಲಿ 1990ರಲ್ಲಿ ಕುಂಬಳೆಯ ಬಾಡಿಗೆ ಕಟ್ಟಡದಲ್ಲಿ ಕುಂಬಳೆ ಸಹಕಾರಿ ಆಸ್ಪತ್ರೆ ಚಟುವಟಿಕೆ ಆರಂಭಿಸಿತ್ತು. ಸಂಘದ ವ್ಯಾಪ್ತಿಯಲ್ಲಿ ಚೆಂಗಳ ಇ.ಕೆ.ನಾಯನಾರ್ ಸ್ಮಾರಕ ಸಹಕಾರಿ ಆಸ್ಪತ್ರೆ ಮತ್ತು ಕುಂಡಂಕುಳಿಯ ಕ್ಲಿನಿಕ್ ಚಟುವಟಿಕೆ ನಡೆಸುತ್ತಿವೆ. ರಾಜ್ಯದಲ್ಲಿ ಎರಡು ಆಸ್ಪತ್ರೆಗಳು ಚಟುವಟಿಕೆ ನಡೆಸುತ್ತಿರುವ ಏಕೈಕ ಸಹಕಾರಿ ಸಂಘ ಎಂಬ ಹೆಗ್ಗಳಿಕೆ ಜಿಲ್ಲಾ ಸಹಕಾರಿ ಆಸ್ಪತ್ರೆ ಸಂಘದ್ದು.







