ಕಾಸರಗೋಡು: ಬಿ.ಇ.ಎಂ. ಹೈಯರ್ ಸೆಕೆಂಡರಿ ಶಾಲೆಯ ಶಾಂತಾರಾಮ - ಸುದಾಕರ ರಂಗ ಮಂಟಪದಲ್ಲಿ ಶಾಲೆಯ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಅಧ್ಯಕ್ಷರಾದ ವೆಂಕಟರಮಣ ಹೊಳ್ಳ ಅವರು ತಾವು ನಿರ್ಮಿಸಿಕೊಟ್ಟ ಶೌಚಾಲಯದ ಕೀಲಿಕೈಯನ್ನು ಕಾಸರಗೋಡಿನ ಶಾಸಕರಾದ ಎನ್.ಎ.ನೆಲ್ಲಿಕುನ್ನು ಅವರ ಮುಖಾಂತರ ಶಾಲಾ ಮುಖ್ಯೋಪಾಧ್ಯಾಯ ರಾಜೇಶ್‍ಚಂದ್ರ ಕೆ.ಪಿ. ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ನವೀಕರಣಗೊಳಿಸಿದ ಶಾಂತಾರಾಮ - ಸುದಾಕರ ವೇದಿಕೆಯನ್ನು ಅನಾವರಣಗೊಳಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಎನ್.ಎ.ನೆಲ್ಲಿಕುನ್ನು ಅವರು ವೆಂಕಟರಮಣ ಹೊಳ್ಳ ಅವರ ಈ ಸೇವೆಯನ್ನು ಶ್ಲಾಘಿಸುತ್ತಾ ಶಾಲೆಗೆ ಕಂಪ್ಯೂಟರ್ ಹಾಗು ಭೋಜನಾಲಯವನ್ನು ನಿರ್ಮಿಸಿ ಕೊಡುವ ಭರವಸೆಯನ್ನು ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ನಗರಸಭಾ ಅಧ್ಯಕ್ಷೆ ಬೀಫಾತಿಮಾ ಇಬ್ರಾಹಿಂ ಅವರು ಹೊಳ್ಳರ ಬಹುಮುಖ ಸೇವೆಯನ್ನು ತುಂಬು ಮನಸ್ಸಿನಿಂದ ಶ್ಲಾಘಿಸಿದರು. ಜಿಲ್ಲಾ ವಿದ್ಯಾಧಿಕಾರಿ ನಂದಿಕೇಶನ್ ಅವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ವೆಂಕಟರಮಣ ಹೊಳ್ಳ ದಂಪತಿಯರನ್ನು ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ನಗರಸಭಾ ಸದಸ್ಯೆ ಶ್ರೀಲತಾ ಟೀಚರ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪ್ರೇಮ್‍ಜಿತ್, ಮುಖ್ಯೋಧ್ಯಾಯ ರಾಜೇಶ್‍ಚಂದ್ರ ಕೆ.ಪಿ, ನೌಕರ ಸಂಘದ ಕಾರ್ಯದರ್ಶಿ , ರಕ್ಷಕ ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯ ರಾಘವನ್ ಮೊದಲಾದವರು ಶುಭಹಾರೈಸಿದರು. ಹಿರಿಯ ಅಧ್ಯಾಪಕ ಗಣೇಶ್ ಕೆ. ಅತಿಥಿಗಳನ್ನು ಸ್ವಾಗತಿಸಿದರು. ಅಧ್ಯಾಪಕ ಯಶವಂತ ವೈ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಾಂಶುಪಾಲೆ ಮೇರಿ ಸೆಬಾಸ್ಟಿಯನ್ ಅವರು ವಂದಿಸಿದರು.





