ಕಾಸರಗೋಡು: ಅತ್ಯಂತ ಶಿಸ್ತುಬದ್ಧವಾಗಿ ತನ್ನ ಜೀವನವನ್ನು ನಡೆಸಿದ ಯತಿಗಳು ಸಮಾಜ, ಧರ್ಮ ಹಾಗು ಯಾವುದೇ ವಿಚಾರಧಾರೆಯನ್ನು ಅತ್ಯಂತ ಸೂಕ್ಷ್ಮ ಹಾಗು ಉನ್ನತ ಚಿಂತನೆಗಳ ಮೂಲಕ ಮುನ್ನಡೆಸಿಕೊಂಡು ಬಂದವರು. ವಿದ್ಯಾದಾನ ಮಾಡುವುದು ಆದ್ಯ ಕರ್ತವ್ಯ ಎಂದು ಪ್ರತಿನಿತ್ಯ ಶಿಷ್ಯಂದಿರನ್ನು ಜೊತೆಯಲ್ಲಿ ಕರೆದೊಯ್ದು ಪಾಠ ಮಾಡುವ, ತನ್ನ ಒತ್ತಡಗಳೇನಿದ್ದರೂ ಕರ್ತವ್ಯದಿಂದ ವಿಮುಕ್ತರಾಗದ ಯತಿವರ್ಯರ ಬದುಕು ಮಾತಿಗೆ ನಿಲುಕದ ಅದ್ಭುತ ಎಂದು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ಹೇಳಿದರು.
ಅವರು ಅಷ್ಠಮಠದ ಹಿರಿಯ ಯತಿ, ನಾಡಿನ ಹಿರಿಯ ವಿದ್ವಾಂಸ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರಿಗೆ ಕಾಸರಗೋಡು ಪೇಟೆ ಶ್ರೀ ವೆಂಕಟ್ರಮಣ ಕ್ಷೇತ್ರದ ವತಿಯಿಂದ ಕ್ಷೇತ್ರ ಸಭಾಂಗಣದಲ್ಲಿ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನುಡಿನಮನ ಸಲ್ಲಿಸಿದ ರಾಜಕೀಯ, ಧಾರ್ಮಿಕ ಮುಂದಾಳು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ನೇರವಾದ, ದಿಟ್ಟವಾದ ಹಾಗು ದೃಢವಾದ ಹೆಜ್ಜೆಗಳನ್ನಿಡುತ್ತಿದ್ದ ಸ್ವಾಮಿಗಳು ಎಲ್ಲವನ್ನೂ ಎಲ್ಲರನ್ನೂ ಸಮಾನವಾಗಿ ನೋಡುತ್ತಿದ್ದರು. ದೇಶ, ಧರ್ಮ, ಸಮಾಜದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಎಳೆಯರಲ್ಲಿರುವ ಒಳ್ಳೆಯ ಚಿಂತನೆಗಳನ್ನು ಗುರುತಿಸಿ ಪೆÇ್ರೀತ್ಸಾಹಿಸುತ್ತಿದ್ದರು. ಮಾತ್ರವಲ್ಲದೆ ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸುವ ಗುಣವನ್ನು ಹೊಂದಿದ್ದರು. ಸ್ವಾಮಿಗಳ ಭೌತಿಕ ಶರೀರ ಅಗಲಿದರೂ ತನ್ನ ತತ್ತ್ವ, ಅನುಷ್ಠಾನ ಮತ್ತು ಕಾರ್ಯಚಟುವಟಿಕೆಗಳ ಮೂಲಕ ಇಡೀ ಜಗತ್ತಿಗೇ ಬೆರಗು ಮೂಡಿಸಿದ ಮಹಾಜ್ಞಾನಿ. ಅವರು ಎಂದೂ ಉಡುಪಿಯ ಮಣ್ಣಿನಲ್ಲಿ ಹಾಗು ಜನರ ಮನದಲ್ಲಿ ಅಮರರಾಗಿರುತ್ತಾರೆ ಎಂದರು.
ಕಾಸರಗೋಡು ಜಿಲ್ಲಾ ಬಿಜೆಪಿ ಅಧ್ಯಕ್ಷ, ನ್ಯಾಯವಾದಿ ಕೆ.ಶ್ರೀಕಾಂತ್ ಯಾವುದೇ ತೀರ್ಮಾನಗಳ ಹಿಂದೆ ಸ್ಪಷ್ಟವಾದ ಒಳಿತಿನ ಚಿಂತನೆಯನ್ನು ಹೊಂದಿದ್ದು, ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಯತಿಗಳು ಅಸ್ಪೃಶ್ಯತೆಯ ಎದುರು ತಳೆದ ಬಲವಾದ ನಿಲುವು, ಹಿಂದು ಧರ್ಮದ ತತ್ತ್ವವನ್ನು ಲೋಕಕ್ಕೆ ಸಾರುವಲ್ಲಿ ತೋರಿದ ಕಾಳಜಿ ಅಪಾರವಾದುದು. ಸಪ್ತ ಋಷಿಗಳಿದ್ದಂತೆ ಕಲಿಯುಗದ ಅಷ್ಟ ಋಷಿಯಾಗಿದ್ದಾರೆ ಪೇಜಾವರ ಶ್ರೀಗಳು ಎಂದು ನುಡಿ ನಮನ ಸಲ್ಲಿಸಿದರು.
ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಹಾಡಿನ ಮೂಲಕ ಸಂತಾಪ ಸೂಚಿಸಿದರು. ಸವಿತಾ ಟೀಚರ್, ವಿಶ್ವ ಹಿಂದೂ ಪರಿಷತ್ತಿನ ಜತೆ ಕಾರ್ಯದರ್ಶಿ ಉಳುವಾನ ಶಂಕರ ಭಟ್, ಕ್ಷೇತ್ರ ಆಡಳಿತ ಮಂಡಳಿ ಉಪಾಧ್ಯಕ್ಷ ರಾಮ್ ಪ್ರಸಾದ್, ಪ್ರೊ.ಎ.ಶ್ರೀನಾಥ್, ಶ್ರೀಲತಾ ಟೀಚರ್, ವಿದ್ಯಾಗಣೇಶ್ ಅಣಂಗೂರು ಮೊದಲಾದವರು ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಭಕ್ತ ಜನರು ಶ್ರೀ ಯತಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಸಂಘಟಕ, ಧಾರ್ಮಿಕ ಮುಖಂಡ, ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷರಾದ ಕೆ.ಎನ್.ವೆಂಕಟ್ರಮಣ ಹೊಳ್ಳ ಸ್ವಾಗತಿಸಿ,ವಂದಿಸಿದರು. ಮಂಜುನಾಥ ಉಡುಪ ಕಾರ್ಯಕ್ರಮ ನಿರ್ವಹಿಸಿದರು.





