ಕಾಸರಗೋಡು: ಚೆರ್ಕಳ ಸಮೀಪದ ನಾಯನ್ಮಾರಮೂಲೆಯಲ್ಲಿ ಮಂಗಳವಾರ ರಾತ್ರಿ ಭಾರೀ ಅಗ್ನಿ ಅನಾಹುತ ಸಂಭವಿಸಿದ್ದು, ನಾಶನಷ್ಟ ಉಂಟಾಗಿದೆ.
ಮಂಗಳವಾರ ರಾತ್ರಿ 9.20ರ ಸುಮಾರಿಗೆ ಇಲ್ಲಿಯ ಗೋಲ್ಡನ್ ಬೇಕರಿ ಸಮೀಪದ ಸೋಫಾ ಮಾರಾಟದಂಗಡಿಯ ಹೊರಗಡೆ ಮಾರಾಟಕ್ಕಿರಿಸಲಾಗಿದ್ದ ಕುಶನ್ ಗಳಿಗೆ ಮೊದಲು ಬೆಂಕಿ ಹತ್ತಿಕೊಂಡಿರುವುದಾಗಿ ತಿಳಿಯಲಾಗಿದೆ. ತಕ್ಷಣ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿ ಪಕ್ಕದ ವಿದ್ಯುತ್ ತಂತಿ ತುಂಡಾಗಿ ಕೆಳಬಿದ್ದು ಮತ್ತಷ್ಟು ಗಂಭೀರತೆಗೆ ಕಾರಣವಾಯಿತು. ತಕ್ಷಣ ಒಟ್ಟುಸೇರಿದ ಸಾರ್ವಜನಿಕರು, ಪೋಲೀಸರು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದರು. ಅರ್ಧ ಗಂಟೆಗಳಷ್ಟು ತಡವಾಗಿ ಅಗ್ನಿಶಾಮಕ ದಳ ಆಗಮಿಸುವಷ್ಟರಲ್ಲಿ ಸಾಕಷ್ಟು ವಸ್ತುಗಳನ್ನು ಅಗ್ನಿ ಆಪೋಶನಗೈದಿತ್ತು. ವಿದ್ಯುತ್ ಅಧಿಕೃತರಿಗೆ ನೀಡಿದ ಮಾಹಿತಿಯ ಮೇರೆಗೆ ಅವಘಡ ಸಂಭವಿಸಿದ ಸ್ಥಳದ ವ್ಯಾಪ್ತಿಯ ವಿದ್ಯುತ್ ಸಂಪರ್ಕವನ್ನು ವಿಚ್ಚೇದಿಸಲಾಯಿತು. ಎಚ್.ಮೊಹಮ್ಮ ಎಂಬವರ ಮಾಲಕತ್ವದ ವ್ಯಾಪಾರ ಸಂಕೀರ್ಣದಲ್ಲಿ ದಾಮೋದರ ಎಂಬವರ ಪರ್ನೀಚರ್ ಅಂಗಡಿ ಕಾರ್ಯವೆಸಗುತ್ತಿದ್ದು, ಈ ಅಂಗಡಿ ಭಾಗಶಃ ಹಾನಿಗೊಂಡಿದೆ. ಬೆಂಕಿ ಹಬ್ಬಲು ಸ್ಪಷ್ಟ ಕಾರಣ ತಿಳಿದುಬಂದಿಲ್ಲ.





